ಫೆಲೆಸ್ತೀನ್ ಕಾರ್ಮಿಕರ ಸ್ಥಾನದಲ್ಲಿ ಇಸ್ರೇಲ್ ಗೆ ಭಾರತೀಯ ಕಾರ್ಮಿಕರು?
ಹೊಸದಿಲ್ಲಿ: ಇಸ್ರೇಲ್ ನಲ್ಲಿ ಫೆಲೆಸ್ತೀನ್ ಕಾರ್ಮಿಕರ ಸ್ಥಾನದಲ್ಲಿ ಭಾರತೀಯ ಕಾರ್ಮಿಕರನ್ನು ನಿಯೋಜಿಸುವ ಸಾಧ್ಯತೆಗಳ ಬಗ್ಗೆ ಆ ದೇಶದೊಂದಿಗೆ ಭಾರತ ಚರ್ಚೆ ನಡೆಸಿಲ್ಲ ಎಂದು ವಿದೇಶ ವ್ಯವಹಾರಗಳ ಸಚಿವಾಲಯ ಗುರುವಾರ ಹೇಳಿದೆ.
ಇಸ್ರೇಲ್ ಗೆ ಭಾರತೀಯ ಕಾರ್ಮಿಕರ ಆಗಮನವನ್ನು ತ್ವರಿತಗೊಳಿಸುವ ಬಗ್ಗೆ ಉಭಯ ನಾಯಕರು ಚರ್ಚಿಸಿದ್ದಾರೆ ಎಂದು ಮಂಗಳವಾರ ಭಾರತದ ಪ್ರಧಾನಿ ನರೇಂದ್ರ ಮೋದಿ ಜೊತೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಫೋನ್ ನಲ್ಲಿ ಮಾತನಾಡಿದ ಬಳಿಕ, ನೆತನ್ಯಾಹು ಅವರ ಕಚೇರಿಯು ಹೇಳಿತ್ತು.
ರಾಜ್ಯಸಭೆಯಲ್ಲಿ ಡಿಸೆಂಬರ್ 14ರಂದು ಕೇಳಲಾದ ಪ್ರಶ್ನೆಯೊಂದಕ್ಕೆ ವಿದೇಶ ಸಚಿವಾಲಯ ನೀಡಿದ್ದ ಉತ್ತರಕ್ಕೂ ನೆತನ್ಯಾಹುರ ಕಚೇರಿಯ ಹೇಳಿಕೆ ವಿರುದ್ಧವಾಗಿದೆ. ಭಾರತೀಯ ಕಾರ್ಮಿಕರನ್ನು ಇಸ್ರೇಲ್ ಗೆ ಕಳುಹಿಸುವ ವಿಷಯದಲ್ಲಿ ಆ ದೇಶದೊಂದಿಗೆ ಯಾವುದೇ ಚರ್ಚೆಯಾಗಿಲ್ಲ ಎಂಬುದಾಗಿ ವಿದೇಶ ಸಚಿವಾಲಯ ಹೇಳಿತ್ತು.
ಈ ಬಗ್ಗೆ ವಿದೇಶ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿಯನ್ನು ಪ್ರಶ್ನಿಸಿದಾಗ, ಸಂಸತ್ ನಲ್ಲಿ ನೀಡಿರುವ ಹೇಳಿಕೆಗೆ ಸರಕಾರ ಬದ್ಧವಾಗಿದೆ ಎಂದು ಹೇಳಿದರು.
‘‘ಖಂಡಿತವಾಗಿಯೂ, ಜಗತ್ತಿನಾದ್ಯಂತ ಕಾರ್ಮಿಕ ಸಂಚಾರ ಒಪ್ಪಂದಗಳನ್ನು ಮಾಡಿಕೊಳ್ಳಲು ಭಾರತ ಉತ್ಸುಕವಾಗಿದೆ. ಈ ಮೂಲಕ ಜಾಗತಿಕ ಕಾರ್ಮಿಕ ಕ್ಷೇತ್ರಕ್ಕೆ ಪ್ರವೇಶ ಪಡೆಯುವುದು, ಭಾರತೀಯ ಕಾರ್ಮಿಕರ ಕ್ಷೇಮವನ್ನು ಖಾತರಿಪಡಿಸುವುದು, ಅವರನ್ನು ನ್ಯಾಯೋಚಿತವಾಗಿ ನೋಡಿಕೊಳ್ಳುವಂತೆ ನೋಡಿಕೊಳ್ಳುವುದು ಮತ್ತು ಅವರ ಹಕ್ಕುಗಳನ್ನು ಖಾತರಿಪಡಿಸುವುದು ಸರಕಾರದ ಉದ್ದೇಶವಾಗಿದೆ’’ ಎಂದು ಬಾಗ್ಚಿ ಗುರುವಾರ ಹೇಳಿದರು.
‘‘ಎಲ್ಲಿಯಾದರೂ ನಿರ್ದಿಷ್ಟ ಉದ್ಯೋಗಾವಕಾಶಗಳಿದ್ದರೆ, ಅಲ್ಲಿಗೆ ಹೋಗಲು ಭಾರತೀಯರು ಸ್ವತಂತ್ರರು. ಪ್ರಧಾನಿ ಮೋದಿ ಮತ್ತು ಇಸ್ರೇಲ್ ಪ್ರಧಾನಿಯ ನಡುವೆ ನಡೆದ ಸಂಭಾಷಣೆಯ ಬಗ್ಗೆ ಇಸ್ರೇಲ್ ಏನು ಹೇಳಿದೆ ಎಂಬ ಬಗ್ಗೆ ಹೇಳಿಕೆ ನೀಡಲು ನಾನು ಹೋಗುವುದಿಲ್ಲ’’ ಎಂದು ಅವರು ನುಡಿದರು.
ಅಕ್ಟೋಬರ್ ನಲ್ಲಿ , ಗಾಝಾದ ಮೇಲೆ ಇಸ್ರೇಲ್ ನ ಯುದ್ಧ ಆರಂಭವಾದಂದಿನಿಂದ ಇಸ್ರೇಲ್ ಅಧಿಕಾರಿಗಳು ಸಾವಿರಾರು ಫೆಲೆಸ್ತೀನ್ ಕಾರ್ಮಿಕರನ್ನು ಗಡಿಪಾರು ಮಾಡಿದ್ದಾರೆ.
ಇಸ್ರೇಲ್-ಹಮಾಸ್ ಸಂಘರ್ಷ ಆರಂಭವಾದಂದಿನಿಂದ 90,000 ಫೆಲೆಸ್ತೀನ್ ಕಾರ್ಮಿಕರ ಕೆಲಸದ ಪರ್ಮಿಟ್ ಗಳನ್ನು ಇಸ್ರೇಲ್ ರದ್ದುಗೊಳಿಸಿದೆ. ಅವರ ಸ್ಥಾನದಲ್ಲಿ ಒಂದು ಲಕ್ಷ ಭಾರತೀಯ ಕಾರ್ಮಿಕರನ್ನು ನೇಮಿಸಲು ಕಂಪೆನಿಗಳಿಗೆ ಅನುಮತಿ ನೀಡುವಂತೆ ಇಸ್ರೇಲ್ ನ ನಿರ್ಮಾಣ ಉದ್ದಿಮೆಯು ಅಲ್ಲಿನ ಸರಕಾರಕ್ಕೆ ಮನವಿ ಮಾಡಿದೆ ಎನ್ನಲಾಗಿದೆ.