ಡಿಒಪಿಟಿಯ ಇತ್ತೀಚಿನ ವಾರ್ಷಿಕ ವರದಿಯಲ್ಲಿ ಕೇಂದ್ರ ಸರಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಕುರಿತು ಮಾಹಿತಿ ನಾಪತ್ತೆ: ವರದಿ

Update: 2024-12-03 11:00 GMT
PC : X

ಹೊಸದಿಲ್ಲಿ: ಕೇಂದ್ರ ಸರಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ)ಯು ಕಳೆದ ತಿಂಗಳು ಬಿಡುಗಡೆಗೊಳಿಸಿದ ತನ್ನ ಇತ್ತೀಚಿನ ವಾರ್ಷಿಕ ವರದಿ(2023-2024)ಯಲ್ಲಿ ಕೇಂದ್ರ ಸರಕಾರದ ಉದ್ಯೋಗಗಳು ಮತ್ತು ಹುದ್ದೆಗಳಲ್ಲಿ ಮೀಸಲಾತಿ ಕುರಿತು ಮಾಹಿತಿಯನ್ನು ತೆಗೆದುಹಾಕಿದೆ ಎಂದು thehindu.com ವರದಿ ಮಾಡಿದೆ.

ಕೇಂದ್ರ ಸರಕಾರದ ಎಲ್ಲ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿಯ ಹುದ್ದೆಗಳ ವಿವರಗಳು ಹಾಗೂ ಎ,ಬಿ,ಸಿ ಮತ್ತು ಡಿ ಗ್ರೂಪ್‌ಗಳಲ್ಲಿಯ ಎಸ್‌ಸಿ/ಎಸ್‌ಟಿ ಮತ್ತು ಒಬಿಸಿ ಉದ್ಯೋಗಿಗಳ ಸಂಖ್ಯೆಯನ್ನೊಳಗೊಂಡ ಕೋಷ್ಟಕ ಹಿಂದಿನ ಎಲ್ಲ ಡಿಒಪಿಟಿ ವಾರ್ಷಿಕ ವರದಿಗಳಲ್ಲಿ ಮೀಸಲಾತಿಗಳ ಕುರಿತು ಅಧ್ಯಾಯದ ಭಾಗವಾಗಿರುತ್ತಿತ್ತು.

ಈ ಬಾರಿ ಈ ಕೋಷ್ಟಕವನ್ನೇಕೆ ಕೈಬಿಡಲಾಗಿದೆ ಎಂಬ ಸುದ್ದಿಸಂಸ್ಥೆಯ ಪ್ರಶ್ನೆಗೆ ಡಿಒಪಿಟಿ ಇನ್ನೂ ಪ್ರತಿಕ್ರಿಯಿಸಿಲ್ಲ.

‘ಉದ್ಯೋಗಗಳಿಂದ ಆದಿವಾಸಿಗಳ ಹೊರಗಿಡುವಿಕೆ’ ಕುರಿತು ರವಿವಾರ ನಡೆದ ರಾಷ್ಟ್ರೀಯ ಸಮಾವೇಶದಲ್ಲಿ ಸರಕಾರಿ ಉದ್ಯೋಗಗಳಲ್ಲಿನ ಮೀಸಲಾತಿ ಕುರಿತು ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಮರೆಮಾಚುವಿಕೆಯ ಬಗ್ಗೆ ಗಂಭೀರ ಕಳವಳಗಳು ವ್ಯಕ್ತವಾಗಿವೆ ಎಂದು ಎಡಪಂಥೀಯ ಸಂಘಟನೆ ಆದಿವಾಸಿ ಅಧಿಕಾರ ರಾಷ್ಟ್ರೀಯ ಮಂಚ್(ಎಎಆರ್‌ಎಂ) ಸೋಮವಾರ ಹೇಳಿದೆ.

2018ರಿಂದ ಡಿಒಪಿಟಿ ವರದಿಗಳು ಕೇಂದ್ರ ಸರಕಾರಿ ಹುದ್ದೆಗಳಲ್ಲಿ ಮೀಸಲಾತಿಗಳ ಕುರಿತು ಸಂಪೂರ್ಣ ಮಾಹಿತಿಗಳನ್ನು ಒದಗಿಸಿಲ್ಲ ಎಂದು ಎಎಆರ್‌ಎಮ್‌ನ ಆದಿವಾಸಿ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರದೊಂದಿಗೆ ಗುರುತಿಸಿಕೊಂಡಿರುವ ಜೆಎನ್‌ಯುದ ಪ್ರೊ.ವಿಕಾಸ ರಾವಲ್ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾವಲ್,ಕೇಂದ್ರ ಸರಕಾರದ ಉದ್ಯೋಗಿಗಳ ಸಂಖ್ಯೆ 30 ಲಕ್ಷಕ್ಕೂ ಹೆಚ್ಚಿದೆ, ಆದರೆ 2018ರಿಂದ ಡಿಒಪಿಟಿ ವರದಿಗಳಲ್ಲಿ ಕೇವಲ ಸುಮಾರು 19 ಲಕ್ಷ ಉದ್ಯೋಗಿಗಳಿಗಾಗಿ ಮೀಸಲಾತಿ ಮಾಹಿತಿಯನ್ನು ಒದಗಿಸಲಾಗಿದೆ. ಯಾವ ಉದ್ಯೋಗಿಗಳನ್ನು ಹೊರಗಿಡಲಾಗಿದೆ ಎಂಬ ಬಗ್ಗೆ ಯಾವುದೇ ವಿವರಣೆಯನ್ನು ನೀಡಲಾಗಿಲ್ಲ ಎಂದು ಹೇಳಿದರು.

ಮಾಹಿತಿಯ ಉದ್ದೇಶಪೂರ್ವಕ ಮರೆಮಾಚುವಿಕೆಯು ದುರ್ಬಲ ವರ್ಗಗಳು ತಮ್ಮ ಹಕ್ಕುಗಳಿಗಾಗಿ ಪ್ರತಿಪಾದಿಸದಂತೆ ಅವರನ್ನು ‘ನಿಶ್ಶಸ್ತ್ರ’ಗೊಳಿಸುವ ಹುನ್ನಾರವಾಗಿದೆ ಎಂದು ಸಿಪಿಎಂ ನಾಯಕಿ ಬೃಂದಾ ಕಾರಟ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಲ್ಲ ಕೇಂದ್ರ ಸರಕಾರಿ ಉದ್ಯೋಗಗಳಲ್ಲಿ ಮೀಸಲಾತಿಗಳ ಕುರಿತು ಸಂಪೂರ್ಣ ಮತ್ತು ಸಮಗ್ರ ಮಾಹಿತಿಗಳನ್ನು ಒದಗಿಸಬೇಕು,ಎಲ್ಲ ಸರಕಾರಿ ನೇಮಕಾತಿಗಳಲ್ಲಿ ಮತ್ತು ಖಾಸಗಿ ವಲಯದಲ್ಲಿಯೂ ಮೀಸಲಾತಿಗಳನ್ನು ಜಾರಿಗೊಳಿಸಬೇಕು ಸೇರಿದಂತೆ ಎಂಟು ಬೇಡಿಕೆಗಳು ರವಿವಾರ ನಡೆದ ಸಮಾವೇಶದಲ್ಲಿ ಮೂಡಿ ಬಂದಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News