ಲಕ್ಷದ್ವೀಪದಲ್ಲಿ ನಿರ್ಲವಣೀಕರಣ ಯೋಜನೆಯನ್ನು ಘೋಷಿಸಿದ ಇಸ್ರೇಲ್

Update: 2024-01-08 19:19 GMT

Photo : ANI

ಹೊಸದಿಲ್ಲಿ: ಲಕ್ಷದ್ವೀಪವನ್ನು ಅಭಿವೃದ್ಧಿಪಡಿಸಲು ಭಾರತದೊಂದಿಗೆ ಸಹಭಾಗಿತ್ವ ವಹಿಸಲು ಇಸ್ರೇಲ್ ಸಿದ್ಧವಿದ್ದು, ಅಲ್ಲಿ ನಿರ್ಲವಣೀಕರಣ ಯೋಜನೆಯನ್ನು ಸ್ಥಾಪಿಸಲೂ ತಾನು ಸಿದ್ಧವಿದ್ದೇನೆ ಎಂದು ಸೋಮವಾರ ಇಸ್ರೇಲ್ ರಾಜತಾಂತ್ರಿಕ ಕಚೇರಿಯು ಪ್ರಕಟಿಸಿದೆ ಎಂದು theprint.in ವರದಿ ಮಾಡಿದೆ.

“ಒಕ್ಕೂಟ ಸರ್ಕಾರವು ನಿರ್ಲವಣೀಕರಣ ಯೋಜನೆಯನ್ನು ಪ್ರಾರಂಭಗೊಳಿಸುವಂತೆ ಕೋರಿಕೊಂಡಿದ್ದರಿಂದ ನಾವು ಕಳೆದ ವರ್ಷ ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದೆವು. ನಾಳೆಯಿಂದಲೇ ಈ ಯೋಜನೆಯ ಕೆಲಸವನ್ನು ಪ್ರಾರಂಭಿಸಲು ಇಸ್ರೇಲ್ ಸಿದ್ಧವಿದೆ” ಎಂದು #ExploreIndianIslands ಎಂಬ ಹ್ಯಾಶ್ ಟ್ಯಾಗ್ ಬಳಸಿ ಭಾರತದಲ್ಲಿನ ಇಸ್ರೇಲ್ ರಾಜತಾಂತ್ರಿಕ ಕಚೇರಿಯು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ.

ಇದಕ್ಕೂ ಮುನ್ನ, ಸದ್ಯ ಅಮಾನತುಗೊಂಡಿರುವ ಮಾಲ್ಡೀವ್ಸ್ ನ ಯುವ ಸಬಲೀಕರಣ, ಮಾಹಿತಿ ಮತ್ತು ಕಲೆಯ ಉಪ ಸಚಿವ ಮರಿಯಾಂ ಶಿಯುನಾ ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಸ್ರೇಲ್ ಕೈಗೊಂಬೆ ಎಂದು ಅಣಕಿಸಿ, ನಂತರ ಆ ಪೋಸ್ಟನ್ನು ಅಳಿಸಿ ಹಾಕಿದ್ದರು. ಇದರ ಬೆನ್ನಿಗೇ ಇಸ್ರೇಲ್ ರಾಜತಾಂತ್ರಿಕ ಕಚೇರಿಯಿಂದ ಈ ಪ್ರಕಟಣೆ ಹೊರಬಿದ್ದಿದೆ.

ನೀರು ನಿರ್ವಹಣೆ ಹಾಗೂ ನಿರ್ಲವಣೀಕರಣವು ಪ್ರಧಾನಿ ನರೇಂದ್ರ ಮೋದಿ ಹಾಗೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರ ಆದ್ಯತೆಯಾಗಿದೆ. ಜುಲೈ 2021ರಲ್ಲಿ ಭಾರತಕ್ಕೆ ಪ್ರಪ್ರಥಮ ಜಲ ರಾಯಭಾರ ಪ್ರತಿನಿಧಿ ಲಯರ್ ಅಸಫ್ ರನ್ನು ಇಸ್ರೇಲ್ ನೇಮಕ ಮಾಡಿತ್ತು. ಲಕ್ಷದ್ವೀಪದಲ್ಲಿನ ನಿರ್ಲವಣೀಕರಣ ಯೋಜನೆಯನ್ನು ಇನ್ನಷ್ಟೇ ಪ್ರಾರಂಭಗೊಳ್ಳಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News