ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆ | ಅಂತಿಮ ಹಂತದ ಬಹಿರಂಗ ಪ್ರಚಾರಕ್ಕೆ ತೆರೆ

Update: 2024-09-29 15:45 GMT

PC : PTI

ಜಮ್ಮು : ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆಯ ಮೂರನೇ ಮತ್ತು ಅಂತಿಮ ಹಂತಕ್ಕಾಗಿ ಬಿರುಸಿನ ಬಹಿರಂಗ ಪ್ರಚಾರ ಕಾರ್ಯ ರವಿವಾರ ಸಂಜೆ ಅಂತ್ಯಗೊಂಡಿದೆ.

ಇನ್ನೇನಿದ್ದರೂ ಮನೆಮನೆ ಪ್ರಚಾರ ಕಾರ್ಯ ಅಷ್ಟೇ. ಪ್ರಮುಖ ರಾಜಕೀಯ ಪಕ್ಷಗಳಿಂದ, ವಿಶೇಷವಾಗಿ ಬಿಜೆಪಿ, ಕಾಂಗ್ರೆಸ್, ಎನ್‌ಸಿ ಮತ್ತು ಪಿಡಿಪಿಯಿಂದ ಪಾಕಿಸ್ತಾನ, ವಿಧಿ 370, ಭಯೋತ್ಪಾದನೆ ಮತ್ತು ಮೀಸಲಾತಿ ಸೇರಿದಂತೆ ಪ್ರಮುಖ ವಿಷಯಗಳ ಕುರಿತು ತೀಕ್ಷ ಟೀಕೆಗಳ ವಿನಿಮಯಕ್ಕೆ ಚುನಾವಣಾ ಪ್ರಚಾರ ಕಣ ಸಾಕ್ಷಿಯಾಗಿತ್ತು.

ಅಂತಿಮ ಹಂತದಲ್ಲಿ ಜಮ್ಮು ಪ್ರದೇಶದ ಜಮ್ಮು,ಉಧಮಪುರ, ಸಾಂಬಾ ಮತ್ತು ಕಥುವಾ ಹಾಗೂ ಉತ್ತರ ಕಾಶ್ಮೀರದ ಬಾರಾಮುಲ್ಲಾ, ಬಂಡಿಪೋರ ಮತ್ತು ಕುಪ್ವಾರಾ ಈ ಏಳು ಜಿಲ್ಲೆಗಳಲ್ಲಿ ಹರಡಿಕೊಂಡಿರುವ 40 ವಿಧಾನಸಭಾ ಕ್ಷೇತ್ರಗಳಲ್ಲಿ ಅ.1ರಂದು ಮತದಾನ ನಡೆಯಲಿದೆ.

ಮಾಜಿ ಉಪಮುಖ್ಯಮಂತ್ರಿಗಳಾದ ತಾರಾಚಂದ್(ಕಾಂಗ್ರೆಸ್) ಮತ್ತು ಮುಝಫ್ಫರ್ ಬೇಗ್ ಸೇರಿದಂತೆ 415 ಅಭ್ಯರ್ಥಿಗಳ ಚುನಾವಣಾ ಭವಿಷ್ಯ ಈ ಹಂತದಲ್ಲಿ ನಿರ್ಧಾರವಾಗಲಿದೆ.

ಈ ಹಿಂದಿನ ಹಂತಗಳಲ್ಲಿ ಹೆಚ್ಚಿನ ಮತದಾನವಾಗಿತ್ತು. ಸೆ.18ರಂದು ಮೊದಲ ಹಂತದಲ್ಲಿ ಶೇ.61.38 ಮತ್ತು ಸೆ.26ರಂದು ಎರಡನೇ ಹಂತದಲ್ಲಿ ಶೇ.57.31ರಷ್ಟು ಮತದಾನ ದಾಖಲಾಗಿತ್ತು.

ಆಗಸ್ಟ್ 2019ರಲ್ಲಿ ಸಂವಿಧಾನದ 370ನೇ ವಿಧಿ ರದ್ದತಿಯ ಬಳಿಕ ಇದು ಜಮ್ಮು-ಕಾಶ್ಮೀರದಲ್ಲಿ ಮೊದಲ ವಿಧಾನಸಭಾ ಚುನಾವಣೆಯಾಗಿದ್ದು, ಅ.8ರಂದು ಫಲಿತಾಂಶಗಳು ಪ್ರಕಟಗೊಳ್ಳಲಿವೆ.

ಬಿಜೆಪಿಯ ಚುನಾವಣಾ ಪ್ರಚಾರದ ನೇತೃತ್ವವನ್ನು ವಹಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರು ‘ದಶಕಗಳ ಅನ್ಯಾಯ ಮತ್ತು ಐತಿಹಾಸಿಕ ತಾರತಮ್ಯ’ವನ್ನು ಪರಿಹರಿಸಲು ಕಳೆದ ಹತ್ತು ವರ್ಷಗಳಲ್ಲಿ ತನ್ನ ಪಕ್ಷದ ಉಪಕ್ರಮಗಳಿಗೆ ಒತ್ತು ನೀಡಿದ್ದರು. ಗೃಹಸಚಿವ ಅಮಿತ್ ಶಾ,ರಕ್ಷಣಾ ಸಚಿವ ರಾಜನಾಥ ಸಿಂಗ್ ಮತ್ತು ಪಕ್ಷಾಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಹಿರಿಯ ಬಿಜೆಪಿ ನಾಯಕರು ಪ್ರಚಾರದಲ್ಲಿ ತೊಡಗಿಕೊಂಡಿದ್ದರು.

2014ರ ವಿಧಾನಸಭಾ ಚುನಾವಣೆಯಲ್ಲಿ ಜಮ್ಮು-ಕಾಶ್ಮೀರದಲ್ಲಿ ತನ್ನ ಅತ್ಯುತ್ತಮ ಚುನಾವಣಾ ಸಾಧನೆಯನ್ನು ಮಾಡಿದ್ದ ಬಿಜೆಪಿ ನಾಲ್ಕು ಜಮ್ಮು ಜಿಲ್ಲೆಗಳಲ್ಲಿ 18 ಸ್ಥಾನಗಳನ್ನು ಮತ್ತು ಒಟ್ಟಾರೆಯಾಗಿ 25 ಸ್ಥಾನಗಳನ್ನು ಗೆದ್ದಿತ್ತು. ಐತಿಹಾಸಿಕವಾಗಿ ಬಿಜೆಪಿ ಕಾಶ್ಮೀರ ಕಣಿವೆಯಲ್ಲಿ ಎಂದಿಗೂ ಯಾವುದೇ ಸ್ಥಾನವನ್ನು ಗೆದ್ದಿಲ್ಲ.

ಪಕ್ಷಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರೂ ಬಿರುಸಿನ ಪ್ರಚಾರವನ್ನು ನಡೆಸಿದ್ದು, ಜಮ್ಮು-ಕಾಶ್ಮೀರದ ರಾಜ್ಯ ಸ್ಥಾನಮಾನ ಮರುಸ್ಥಾಪನೆ ಮತ್ತು ಎನ್‌ಸಿ ಜೊತೆ ಮೈತ್ರಿಯಲ್ಲಿ ಜನಸ್ನೇಹಿ ಸರಕಾರದ ಭರವಸೆಯನ್ನು ನೀಡಿದ್ದಾರೆ.

2014ರ ಚುನಾವಣೆಯಲ್ಲಿ ಜಮ್ಮು ಜಿಲ್ಲೆಗಳಲ್ಲಿ ಒಂದೂ ಸ್ಥಾನವನ್ನು ಗೆಲ್ಲುವಲ್ಲಿ ವಿಫಲಗೊಂಡಿದ್ದ ಕಾಂಗ್ರೆಸ್‌ನ ನಿರಾಶಾದಾಯಕ ಪ್ರದರ್ಶನದ ಬಳಿಕ ಈ ಸಲ ಪಕ್ಷವು ಉತ್ತಮ ಸಾಧನೆಯ ನಿರೀಕ್ಷೆಯನ್ನು ಹೊಂದಿದೆ. ಬಿಜೆಪಿ ವಿರುದ್ಧದ ಆಡಳಿತ ವಿರೋಧಿ ಭಾವನೆಗಳು ಪಕ್ಷಕ್ಕೆ ಹೆಚ್ಚಿನ ಬಲವನ್ನು ನೀಡಿವೆ.

ಮಾಜಿ ಮುಖ್ಯಮಂತ್ರಿಗಳಾದ ಫಾರೂಕ್ ಅಬ್ದುಲ್ಲಾ, ಉಮರ್ ಅಬ್ದುಲ್ಲಾ ಮತ್ತು ಮೆಹಬೂಬ ಮಫ್ತಿ ಅವರ ನೇತೃತ್ವದಲ್ಲಿ ಎನ್‌ಸಿ ಮತ್ತು ಪಿಡಿಪಿ ಪ್ರಚಾರದಲ್ಲಿ ಹಿಂದೆ ಬಿದ್ದಿರಲಿಲ್ಲ.


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News