ಜಮ್ಮುಕಾಶ್ಮೀರ ಚುನಾವಣೆ | ತ್ರಿಶಂಕು ವಿಧಾನಸಭೆಯ ಸಾಧ್ಯತೆ ನಡುವೆ ಎನ್ಸಿ-ಕಾಂಗ್ರೆಸ್ ಮೈತ್ರಿಕೂಟದ ಸರಕಾರಕ್ಕೆ ಬೆಂಬಲದ ಸುಳಿವು ನೀಡಿದ ಪಿಡಿಪಿ

Update: 2024-10-06 15:46 GMT

ಹೊಸದಿಲ್ಲಿ : ಜಮ್ಮುಕಾಶ್ಮೀರದಲ್ಲಿ ತ್ರಿಶಂಕು ವಿಧಾನಸಭೆ ರೂಪುಗೊಳ್ಳುವ ಬಗ್ಗೆ ಚುನಾವಣೋತ್ತರ ಸಮೀಕ್ಷೆಗಳ ಭವಿಷ್ಯದ ನಡುವೆ ಪಿಡಿಪಿಯು ಸರಕಾರ ರಚನೆಗೆ ತಾನು ಕಾಂಗ್ರೆಸ್-ನ್ಯಾಷನಲ್ ಕಾನ್ಫರೆನ್ಸ್ ಮೈತ್ರಿಕೂಟವನ್ನು ಬೆಂಬಲಿಸಬಹುದು ಎಂದು ಸುಳಿವು ನೀಡಿದೆ.

ಜಮ್ಮುಕಾಶ್ಮೀರ ವಿಧಾನಸಭೆಯು 90 ಸದಸ್ಯಬಲವನ್ನು ಹೊಂದಿದ್ದು ಸರಕಾರ ರಚನೆಗೆ 46 ಶಾಸಕರ ಅಗತ್ಯವಿದೆ. ಈವರೆಗಿನ ಹೆಚ್ಚಿನ ಚುನಾವಣೋತ್ತರ ಸಮೀಕ್ಷೆಗಳು ಕಾಂಗ್ರೆಸ್-ಎನ್ಸಿ ಮೈತ್ರಿಕೂಟ 35ರಿಂದ 40,ಬಿಜೆಪಿ 27ರಿಂದ 32 ಮತ್ತು ಪಿಡಿಪಿ 6ರಿಂದ 12 ಸ್ಥಾನಗಳನ್ನು ಗಳಿಸಬಹುದು ಎಂದು ಅಂದಾಜಿಸಿವೆ.

ಕೇಂದ್ರ ಗೃಹಸಚಿವಾಲಯದ ಸಲಹೆಯ ಮೇರೆಗೆ ಉಪ ರಾಜ್ಯಪಾಲರು ವಿಧಾನಸಭೆಗೆ ಐವರು ಶಾಸಕರನ್ನು ನಾಮ ನಿರ್ದೇಶನ ಮಾಡಲು ಅವಕಾಶವಿದ್ದು, ಒಟ್ಟು ಶಾಸಕರ ಸಂಖ್ಯೆ 95ಕ್ಕೆ ಹೆಚ್ಚುತ್ತದೆ. ನಾಮ ನಿರ್ದೇಶಿತ ಶಾಸಕರಿಗೆ ಮತದಾನದ ಹಕ್ಕುಗಳಿರುವುದರಿಂದ ಬಹುಮತಕ್ಕೆ 48 ಶಾಸಕರ ಬೆಂಬಲ ಅಗತ್ಯವಾಗುತ್ತದೆ.

ತ್ರಿಶಂಕು ವಿಧಾನಸಭೆ ರೂಪುಗೊಳ್ಳುವ ಸಾಧ್ಯತೆಯ ಹಿನ್ನೆಲೆಯಲ್ಲಿ ಪಿಡಿಪಿಯ ಹಿರಿಯ ನಾಯಕ ಹಾಗೂ ಲಾಲ್ಚೌಕ್ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಝುಹೈಬ್ ಯೂಸುಫ್ ಮಿರ್ ಅವರು, ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಲು ತನ್ನ ಪಕ್ಷವು ಕಾಂಗ್ರೆಸ್-ಎನ್ಸಿ ಮೈತ್ರಿಕೂಟವನ್ನು ಸೇರಬಹುದು ಎಂದು ಹೇಳಿದರು.

ಕಾಶ್ಮೀರದ ಅನನ್ಯತೆಯನ್ನು ರಕ್ಷಿಸಲು ಯಾವುದೇ ಕ್ರಮಕ್ಕೆ ತನ್ನ ಪಕ್ಷವು ಸಿದ್ಧವಾಗಿದೆ ಎಂದು ಮಿರ್ ಸುದ್ದಿಸಂಸ್ಥೆಗೆ ತಿಳಿಸಿದರು. ಆದರೆ ಚುನಾವಣೋತ್ತರ ಸಮೀಕ್ಷೆಗಳ ಮುನ್ನೋಟವನ್ನು ‘ಟೈಮ್ ಪಾಸ್’ ಎಂದು ಬಣ್ಣಿಸಿದರು.

‘ಜಮ್ಮುಕಾಶ್ಮೀರದಲ್ಲಿ ರಚನೆಯಾಗಲಿರುವ ಜಾತ್ಯತೀತ ಸರಕಾರದ ಅನಿವಾರ್ಯ ಮತ್ತು ಪ್ರಮುಖ ಭಾಗವಾಗುವ ವಿಶ್ವಾಸವನ್ನು ಪಿಡಿಪಿ ಹೊಂದಿದೆ. ಕಾಶ್ಮೀರದ ಅನನ್ಯತೆಯನ್ನು ರಕ್ಷಿಸಲು ಯಾವುದೇ ಕ್ರಮಕ್ಕೂ ನಾವು ಸಿದ್ಧರಿದ್ದೇವೆ ಎಂದು ಹಿಂದೆಯೂ ಹೇಳಿದ್ದೆವು. ಬಿಜೆಪಿ ವಿರುದ್ಧ ಸರಕಾರ ರಚನೆ ಮುಖ್ಯವಾಗಿದೆ ’ಎಂದ ಅವರು, ಪಿಡಿಪಿ ಜಾತ್ಯತೀತ ಸರಕಾರ ರಚನೆಯನ್ನು ಬೆಂಬಲಿಸಿದರೂ, ಈ ಕೇಂದ್ರಾಡಳಿತ ಪ್ರದೇಶದಲ್ಲಿ ಸರಕಾರವು ಹೆಚ್ಚು ದಿನ ಉಳಿಯುತ್ತದೆ ನಂಬಿಕೆ ಅದಕ್ಕಿಲ್ಲ. ಮುಖ್ಯಮಂತ್ರಿಗಳು ಭಿಕ್ಷಾ ಪಾತ್ರೆಯೊಂದಿಗೆ ಉಪ ರಾಜ್ಯಪಾಲರ ಬಳಿ ಹೋಗುವ ಸ್ಥಿತಿಯಲ್ಲಿರುವ ದಿಲ್ಲಿ ಶೈಲಿಯಲ್ಲಿಯೇ ಇಲ್ಲಿಯೂ ಸರಕಾರವನ್ನು ನಡೆಸಲು ಅವರು (ಬಿಜೆಪಿ ) ಪ್ರಯತ್ನಿಸುತ್ತಾರೆ. ದಿಲ್ಲಿ ಸರಕಾರಕ್ಕೆ ಆಗಿದ್ದೇ ಇಲ್ಲಿಯೂ ಆಗಲಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News