ಜಮ್ಮುಕಾಶ್ಮೀರ ವಿಧಾನಸಭೆಗೆ ಐವರು ಸದಸ್ಯರ ನಾಮನಿರ್ದೇಶನಕ್ಕೆ ಲೆಫ್ಟಿನೆಂಟ್ ಗವರ್ನರ್ ನಿರ್ಧಾರ : ಪ್ರತಿಪಕ್ಷಗಳ ವಿರೋಧ

Update: 2024-10-07 16:54 GMT
PC : PTI 

ಶ್ರೀನಗರ : ಜಮ್ಮು ಹಾಗೂ ಕಾಶ್ಮೀರ ವಿಧಾನ ಸಭೆಯ ಮತ ಎಣಿಕೆ ಅಕ್ಟೋಬರ್ 8ರಂದು ನಡೆಯಲಿದೆ. ಈ ನಡುವೆ ಲೆಫ್ಟಿನೆಂಟ್ ಗವರ್ನರ್ ವಿಧಾನ ಸಭೆಗೆ ಐವರು ಸದಸ್ಯರನ್ನು ನಾಮನಿರ್ದೇಶನ ಮಾಡಲು ನಿರ್ಧರಿಸಿದ್ದಾರೆ. ಈ ನಡೆ ಜಮ್ಮು ಹಾಗೂ ಕಾಶ್ಮೀರದ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ದಶಕಗಳ ಬಳಿಕ ಇಲ್ಲಿ ನಡೆದ ಚುನಾವಣೆಯಲ್ಲಿ ಅತಂತ್ರ ವಿಧಾನ ಸಭೆ ನಿರ್ಮಾಣವಾಗಬಹುದು ಎಂದು ಚುನಾವಣಾ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಈ ಹಿನ್ನೆಲೆಯಲ್ಲಿ ಜಮ್ಮು ಹಾಗೂ ಕಾಶ್ಮೀರದ ಸರಕಾರ ರಚನೆಯಲ್ಲಿ ಈ ಐವರು ನಾಮನಿರ್ದೇಶಿತ ಸದಸ್ಯರು ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆ ಇದೆ. ಈ ಕಾರಣದಿಂದ ಲೆಫ್ಟಿನೆಂಟ್ ಗವರ್ನರ್ ಅವರ ನಡೆಯನ್ನು ಕಾಂಗ್ರೆಸ್, ನ್ಯಾಷನಲ್ ಕಾಂಗ್ರೆಸ್ ಹಾಗೂ ಪಿಡಿಪಿ ತೀವ್ರವಾಗಿ ವಿರೋಧಿಸಿವೆ.

ಕಾಶ್ಮೀರಿ ನಿರಾಶ್ರಿತ ವ್ಯಕ್ತಿಗಳು ಹಾಗೂ ಪಾಕಿಸ್ತಾನ ಆಕ್ರಮಿತ ಜಮ್ಮು ಹಾಗೂ ಕಾಶ್ಮೀರದ ನಿರಾಶ್ರಿತ ವ್ಯಕ್ತಿಗಳನ್ನು ಪ್ರತಿನಿಧಿಸುವ ಈ ಐವರು ಶಾಸಕರು ಇತರ ಚುನಾಯಿತ ಪ್ರತಿನಿಧಿಗಳಂತೆ ಸಂಪೂರ್ಣ ಶಾಸನಾತ್ಮಕ ಅಧಿಕಾರ ಹಾಗೂ ಹಕ್ಕುಗಳನ್ನು ಪಡೆಯಲಿದ್ದಾರೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.

ಇಂತಹ ಯಾವುದೇ ನಡೆ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಮೂಲಭೂತ ತತ್ವಗಳ ಮೇಲಿನ ಹಲ್ಲೆ ಎಂದು ನ್ಯಾಷನಲ್ ಕಾನ್ಫರೆನ್ಸ್‌ನೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಸ್ಫರ್ಧಿಸಿರುವ ಕಾಂಗ್ರೆಸ್ ಹೇಳಿದೆ.

ಕೇಂದ್ರ ಸಚಿವಾಲಯದ ಸಲಹೆಯನ್ನು ಆಧರಿಸಿ ಲೆಫ್ಟಿನೆಂಟ್ ಗವರ್ನರ್ ಐವರು ಸದಸ್ಯರನ್ನು ನಾಮ ನಿರ್ದೇಶನ ಮಾಡುವರು. ಈ ಸದಸ್ಯರು ಸರಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಪ್ರಸಕ್ತ ಜಮ್ಮು ಹಾಗೂ ಕಾಶ್ಮೀರ ವಿಧಾನ ಸಭೆಯ ಸದಸ್ಯ ಬಲ 90. ಐವರು ನಾಮನಿರ್ದೇಶನಗೊಂಡಲ್ಲಿ ಸದಸ್ಯ ಬಲ 95ಕ್ಕೆ ಏರಿಕೆಯಾಗಲಿದೆ. ಆಗ ಸರಕಾರ ರಚನೆಗೆ 48 ಸದಸ್ಯರ ಸರಳ ಬಹುಮತ ಅಗತ್ಯವಾಗಿರಲಿದೆ.

ಕಿಂಗ್‌ಮೇಕರ್ಸ್‌?

ಚುನಾವಣಾ ಸಮೀಕ್ಷೆ ಜಮ್ಮು ಹಾಗೂ ಕಾಶ್ಮೀರದಲ್ಲಿ ಅತಂತ್ರ ವಿಧಾನ ಸಭೆ ಉಂಟಾಗಬಹುದು ಎಂದು ಭವಿಷ್ಯ ನುಡಿದಿದೆ. ಈ ಭವಿಷ್ಯ ನಿಜವಾದಲ್ಲಿ , ಈ ಐವರು ನಾಮನಿರ್ದೇಶಿತ ಸದಸ್ಯರು ಕಿಂಗ್ ಮೇಕರ್ ಆಗಲಿದ್ದಾರೆ ಹಾಗೂ ಬಿಜೆಪಿಗೆ ಸರಕಾರ ರಚಿಸಲು ಬೆಂಬಲ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News