ಜಾರ್ಖಂಡ್: ಸೀಟು ಹಂಚಿಕೆಯಲ್ಲಿ ಎನ್‌ಡಿಎ ಪಕ್ಷಗಳ ನಡುವೆ ಸಹಮತ
ರಾಂಚಿ: ಜಾರ್ಖಂಡ್ ರಾಜ್ಯ ವಿಧಾನಸಭಾ ಚುನಾವಣೆಯ ಸೀಟು ಹಂಚಿಕೆಯಲ್ಲ್ ಎನ್‌ಡಿಎ ಮೈತ್ರಿಕೂಟದಲ್ಲಿ ಸಹಮತವೇರ್ಪಟ್ಟಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಾಗೂ ಜಾರ್ಖಂಡ್‌ನಲ್ಲಿ ಪಕ್ಷದ ಸಹ ಉಸ್ತುವಾರಿ ಹಿಮಂತ ಬಿಸ್ವ ಶರ್ಮಾ ಶುಕ್ರವಾರ ತಿಳಿಸಿದ್ದಾರೆ. ಎನ್‌ಡಿಎ ಒಕ್ಕೂಟದ ಪಕ್ಷಗಳಾದ ಎಜೆಎಸ್‌ಯು 10, ಜೆಡಿಯು 2 ಸ್ಥಾನಗಳಿಗೆ ಹಾಗೂ ಎಲ್‌ಜೆಪಿ ಒಂದು ಸ್ಥಾನದಲ್ಲಿ ಸ್ಪರ್ಧಿಸಲಿದ್ದು, ಉಳಿದ 68 ಸ್ಥಾನಗಳಲ್ಲಿ ಬಿಜೆಪಿಯು ಕಣಕ್ಕಿಳಿಯಲಿದೆ ಎಂದು ಅವರು ಹೇಳಿದ್ದಾರೆ.
ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿರುವ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ನಾಮಪತ್ರ ಸಲ್ಲಿಕೆಯ ಅಂತಿಅಮ ದಿನಾಂಕಕ್ಕೆ ಮುನ್ನ ಪರಿಸ್ಥಿತಿಯನ್ನು ಅವಲಂಭಿಸಿ ಒಂದೆರಡು ಸ್ಥಾನಗಳಲ್ಲಿ ಕೊನೆಗಳಿಗೆಯಲ್ಲಿ ಬದಲಾವಣೆಗಳನ್ನು ಮಾಡುವ ಸಾಧ್ಯತೆಯಿದೆ ಎಂದು ತಿಳಿಸಿದರು.
ಅಭ್ಯರ್ಥಿಗಳ ಹೆಸರುಗಳನ್ನು ಯಾವಾಗ ಘೋಷಿಸಲಾಗುವುದೆಂಬ ಪತ್ರಕರ್ತರ ಪ್ರಶ್ನೆಗೆ ಅವರು ಶೀಘ್ರದಲ್ಲೇ, ಒಂದೆರಡು ದಿನಗಳೊಳಗೆ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಲಾಗುವುದೆಂದು ತಿಳಿಸಿದರು.
ಜಾರ್ಖಂಡ್ ಬಿಜೆಪಿ ಅಧ್ಯಕ್ಷ ಬಾಬುಲಾಲ್ ಮರಾಂಡಿ, ಎಜೆಎಸ್‌ಯು ಅಧ್ಯಕ್ಷ ಸುದೇಶ್ ಮಹಾತೊ ಅವರು ಕೂಡಾ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಇದಕ್ಕೂ ಮುನ್ನ, ಜಾರ್ಖಂಡ್‌ನ ಚುನಾವಣಾ ಉಸ್ತುವಾರಿ ಮತ್ತು ಕೇಂದ್ರ ಸಚಿವ ಶಿವರಾಜ್ ಸಿಂಗ್‌ಚೌಹಾಣ್ ಅವರು ಕೂಡಾ ಬಿಜೆಪಿ, ಎಜೆಎಸ್‌ಯು, ಜೆಡಿಯು ಹಾಗೂ ಎಲ್‌ಜೆಪಿ (ರಾಮವಿಲಾಸ್)ಪಕ್ಷಗಳು ಎನ್‌ಡಿಎ ಬ್ಯಾನರ್‌ನಡಿಯಲ್ಲಿ ಚುನಾವಣೆ ನಡೆಸಲಿವೆ ಹಾಗೂ ಜಂಟಿಯಾಗಿ ಚುನಾವಣಾ ಪ್ರಚಾರ ನಡೆಸಲಿವೆ ಎಂದು ತಿಳಿಸಿದ್ದರು.
ಜಾರ್ಖಂಡ್ ವಿಧಾನಸಭಾ ಚುನಾವಣೆಯು ನವೆಂಬರ್ 13 ಹಾಗೂ 20ರಂದು ಎರಡು ಹಂತಗಳಲ್ಲಿ ನಡೆಯಲಿದೆ. ನವೆಂಬರ್ 23ರಂದು ಮತ ಏಣಿಕೆ ನಡೆಯಲಿದೆ ಎಂದರು.