ಮುಸ್ಲಿಮನೆಂದು ಭಾವಿಸಿ ಕಾರಿನಿಂದ ಹೊರಗೆಳೆದು ಆರೆಸ್ಸೆಸ್ ಸದಸ್ಯನ ಮೇಲೆ ಹಲ್ಲೆಗೈದ ಕನ್ವರಿಯಾಗಳು
ಹರಿದ್ವಾರ (ಉತ್ತರಾಖಂಡ): ಕನ್ವರಿಯಾಗಳ ಗುಂಪೊಂದು ಮುಸ್ಲಿಂ ವ್ಯಕ್ತಿಯೆಂದು ತಪ್ಪಾಗಿ ಗ್ರಹಿಸಿ ಆರೆಸ್ಸೆಸ್- ಬಿಜೆಪಿ ಸದಸ್ಯನನ್ನು ಕಾರಿನಿಂದ ಹೊರಗೆಳೆದು ಹಲ್ಲೆ ನಡೆಸಿರುವ ಘಟನೆ ಹರಿದ್ವಾರ ಜಿಲ್ಲೆಯ ಮಂಗಲೌರ್ ನಗರದಲ್ಲಿ ನಡೆದಿದೆ.
ಪ್ರತಾಪ್ ಸಿಂಗ್ (63) ಹಲ್ಲೆಗೀಡಾದ ವ್ಯಕ್ತಿಯಾಗಿದ್ದು,ತಾನು ಆರೆಸ್ಸೆಸ್-ಬಿಜೆಪಿ ಸದಸ್ಯ ಎಂದು ಅವರು ಹೇಳಿಕೊಂಡಿದ್ದಾರೆ. ಅವರ ಕಾರು ಆಕಸ್ಮಿಕವಾಗಿ ಕನ್ವರಿಯಾಗಳ ಪವಿತ್ರ ಜಲದ ಕಲಶಗಳಿದ್ದ ಕಾವಡಿಗೆ ತಾಗಿದ್ದು ಹಲ್ಲೆಗೆ ಕಾರಣವಾಗಿತ್ತು. ಗಡ್ಡವನ್ನು ಹೊಂದಿದ್ದ ಸಿಂಗ್ ಕಪ್ಪು ಟೋಪಿಯನ್ನು ಧರಿಸಿದ್ದರಿಂದ ಮತ್ತು ಅವರ ಜೊತೆಗೆ ಬುರ್ಕಾ ಧರಿಸಿದ್ದ ಮಹಿಳೆ ಇದ್ದಿದ್ದರಿಂದ ಅವರು ಮುಸ್ಲಿಮ್ ವ್ಯಕ್ತಿಯೆಂದು ಕನ್ವರಿಯಾಗಳು ಭಾವಿಸಿದ್ದರು ಎಂದು indianexpress.com ವರದಿ ಮಾಡಿದೆ.
ಜು.10ರಂದು ನಡೆದಿದ್ದ ಹಲ್ಲೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಶೇರ್ ಆಗಿದೆ. ಕನ್ವರಿಯಾಗಳು ಕಾರನ್ನು ಉರುಳಿಸಿ ದೊಣ್ಣೆಗಳಿಂದ ಅದರ ಮೇಲೆ ದಾಳಿ ನಡೆಸುತ್ತಿರುವುದನ್ನೂ ವೀಡಿಯೊ ತೋರಿಸಿದೆ.
‘ನನ್ನೊಂದಿಗಿದ್ದ ಮಹಿಳೆ ಸ್ಥಳೀಯ ಬಿಜೆಪಿ ಅಲ್ಪಸಂಖ್ಯಾತ ಘಟಕದ ಮಹಿಳೆಯಾಗಿದ್ದು, ಆಕೆ ತನ್ನ ಮಗನನ್ನು ಮದರಸಕ್ಕೆ ಬಿಡಲು ನಾನು ನೆರವಾಗಿದ್ದೆ. ಮರಳಿ ಬರುವಾಗ ಊಟಕ್ಕೆಂದು ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದೆ. ಕಾರು ನಿಲ್ಲಿಸುವಾಗ ಅಲ್ಲಿ ಏನೂ ಇರಲಿಲ್ಲ, ಆದರೆ ನಾನು ಮರಳಿ ಬಂದಾಗ ಕಾರಿನ ಎದುರು ಯಾರೋ ಕಾವಡಿಯನ್ನು ಇರಿಸಿದ್ದರು. ನಾನು ಕಾರನ್ನು ಚಲಾಯಿಸಿದಾಗ ಅದು ಆಕಸ್ಮಿಕಗಾಗಿ ಕಾವಡಿಗೆ ತಾಗಿತ್ತು. ನಾನು ಮುಸ್ಲಿಮ್ ಎಂದು ಜರಿದ ಅವರು ನನ್ನ ಮೇಲೆ ಹಲ್ಲೆ ನಡೆಸಿದ್ದರು. ನಾನು ಹಿಂದು ಮತ್ತು ಆರೆಸ್ಸೆಸ್-ಬಿಜೆಪಿ ಸದಸ್ಯ ಎಂದು ಹೇಳಿಕೊಂಡರೂ ಬಿಡಲಿಲ್ಲ. ಪುಣ್ಯಕ್ಕೆ ಮಹಿಳೆಗೆ ಏನೂ ಮಾಡದೆ ಅಲ್ಲಿಂದ ಕಳುಹಿಸಿದ್ದರು’ ಎಂದು ಸಿಂಗ್ ಸುದ್ದಿಸಂಸ್ಥೆಗೆ ತಿಳಿಸಿದರು.
ಸಿಂಗ್ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಪೊಲೀಸರು ಸಿಂಗ್ ಅವರನ್ನು ಮನೆಗೆ ಬಿಟ್ಟಿದ್ದರು, ಆದರೆ ಘಟನೆಯಲ್ಲಿ ಅವರು ಕಾರಿನಲ್ಲಿದ್ದ ತನ್ನ ಫೋನ್ ಕಳೆದುಕೊಂಡಿದ್ದಾರೆ.
ತಾನು ಆರೆಸ್ಸೆಸ್ ಮತ್ತು ಬಿಜೆಪಿ ಸದಸ್ಯನಾಗಿದ್ದೇನೆ, ಆದರೆ ಘಟನೆಯ ಕುರಿತು ವಿಚಾರಿಸಲು ಆರೆಸ್ಸೆಸ್ ಅಥವಾ ಬಿಜೆಪಿಯ ಯಾರೂ ತನ್ನನ್ನು ಸಂಪರ್ಕಿಸಲಿಲ್ಲ ಎಂದು ಸಿಂಗ್ ತಿಳಿಸಿದರು.