ಕಥುವಾ | ಶಂಕಿತ ಉಗ್ರರ ವಿರುದ್ಧ ಕಾರ್ಯಾಚರಣೆ ; 10 ಮಂದಿ ಬಂಧನ
ಶ್ರೀನಗರ : ಜಮ್ಮುಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಶಂಕಿತ ಉಗ್ರರ ಜಾಲವನ್ನು ಭೇದಿಸುವ ಉದ್ದೇಶದಿಂದ ನಡೆಸಲಾಗುತ್ತಿರುವ ಬೃಹತ್ ಕಾರ್ಯಾಚರಣೆಯಲ್ಲಿ ಬುಧವಾರದಂದು ವಿವಿಧ ಉಗ್ರಗಾಮಿ ಗುಂಪುಗಳ 10 ಮಂದಿ ಓವರ್ ಗ್ರೌಂಡ್ ಕಾರ್ಯಕರ್ತರನ್ನು ಬಂಧಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ಗಡಿಪ್ರದೇಶಗಳಾದ ಕಾನಾಚಕ್, ಹರಿಯಾ ಚಾಕ್,ಸ್ಪಾಲ್ಪೇನ್ ಹಾಗೂ ಚಾಕ್ ವಝೀರ್ ಲಾಹಬ್ಜು ಪ್ರದೇಶಗಳಲ್ಲದೆ, ಮಲ್ಹಾರ್, ಬಾನಿ ಹಾಗೂ ಬಿಲ್ಲಾವರ್ ಪ್ರದೇಶಗಳಲ್ಲಿ ಪೊಲೀಸರು ಹಾಗೂ ಸಿಆರ್ಪಿಎಫ್ ಪಡೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಇವರನ್ನು ಬಂಧಿಸಲಾಗಿದೆ. ಬಂಧಿತರು ಉಗ್ರಗಾಮಿ ಗುಂಪುಗಳಿಗೆ ಸಾಗಣೆ ಹಾಗೂ ಆರ್ಥಿಕ ನೆರವನ್ನು ಒದಗಿಸುತ್ತಿದ್ದರೆಂದು ಪೊಲೀಸರು ತಿಳಿಸಿದ್ದಾರೆ.
ಮಲ್ಹಾರ್,ಬಿಲ್ಲಾವರ್ ಹಾಗೂ ಬಾನಿ ಪೊಲೀಸ್ಠಾಣೆಗಳಲ್ಲಿ ದಾಖಲಾಗಿರುವ ಉಗ್ರಗಾಮಿ ಚಟುವಟಿಕೆಗಳಿಗೆ ಸಂಬಂಧಿಸಿ ಮೂರು ಎಫ್ಐಆರ್ ದಾಖಲಾಗಿದ್ದು, ಅವುಗಳ ಆಧಾರದಲ್ಲಿ ಈ ದಾಳಿಗಳನ್ನು ಆಯೋಜಿಸಲಾಗಿತ್ತೆಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಇತ್ತೀಚೆಗೆ ಕಥುವಾ ಹಾಗೂ ಉಧಂಪುರ ಜಿಲ್ಲೆಗಳಲ್ಲಿ ಭದ್ರತಾಪಡೆಗಳ ಜೊತೆ ನಡೆದ ಎರಡು ಪ್ರತ್ಯೇಕ ಎನ್ಕೌಂಟರ್ಗಳಲ್ಲಿ ಜೆಇಎಂ ಗುಂಪಿಗೆ ಸೇರಿದ ಮೂವರು ಶಂಕಿತ ವಿದೇಶಿ ಉಗ್ರರನ್ನು ಹತ್ಯೆಗೈಯಲಾಗಿತ್ತು.