ರಾಜಸ್ಥಾನ | ವನ್ಯಜೀವಿ ಸಂರಕ್ಷಿಸುತ್ತಿರುವ ಆಧುನಿಕ ಶ್ರವಣ ಕುಮಾರ
ಜೋಧ್ ಪುರ : ಪರಿಸರ ಸಮತೋಲನದಲ್ಲಿ ವನ್ಯಜೀವಿಗಳು ವಹಿಸುವ ಪಾತ್ರದ ಕುರಿತು ಈಗ ಜನಸಾಮಾನ್ಯರಲ್ಲಿ ಹೆಚ್ಚು ಜಾಗೃತಿ ಮೂಡುತ್ತಿದ್ದು, ವನ್ಯಜೀವಿಗೆ ಆದ್ಯತೆ ನೀಡುವ ಹವ್ಯಾಸಿ ವನ್ಯಜೀವಿ ಸಂರಕ್ಷಕರ ಸಂಖ್ಯೆಯೂ ದಿನೇ ದಿನೇ ಹೆಚ್ಚುತ್ತಿದೆ. ಇಂತಹ ಹವ್ಯಾಸಿ ವನ್ಯಜೀವಿ ಸಂರಕ್ಷಕರೊಬ್ಬರ ಸಾಹಸದಿಂದ ವನ್ಯಜೀವಿ ಸಂರಕ್ಷಣೆಗೆ 1000 ಸದಸ್ಯರನ್ನು ಹೊಂದಿರುವ ವಾಟ್ಸ್ ಆ್ಯಪ್ ಗುಂಪೊಂದು ಅಸ್ತಿತ್ವಕ್ಕೆ ಬಂದಿದ್ದು, ಈ ಗುಂಪಿನ ಪ್ರಯತ್ನ ಮತ್ತು ಕಾಳಜಿಯಿಂದ ಅಳಿವಿನಂಚಿನಲ್ಲಿರುವ ವನ್ಯಜೀವಿ ಪ್ರಭೇದಗಳಿಗೆ ಮರು ಜೀವ ದೊರೆತಿರುವ ಪ್ರಕರಣ ರಾಜಸ್ಥಾನದ ಜೋಧ್ ಪುರ್ ನಿಂದ ವರದಿಯಾಗಿದೆ.
30 ವರ್ಷದ ಶ್ರಿವಣ್ ಜೋಧ್ ಪುರ್ ಬಳಿಯಿರುವ ಧಾವಾ ಗ್ರಾಮದ ನಿವಾಸಿಯಾಗಿದ್ದಾರೆ. ನೂರಾರು ವರ್ಷಗಳಿಂದ ಈ ಗ್ರಾಮವು ಮಾನವ ಮತ್ತು ವನ್ಯಜೀವಿಗಳ ಸಹಜೀವನಕ್ಕೆ ಸಾಕ್ಷಿಯಾಗಿದೆ. ಆದರೆ, ಈ ನಾಜೂಕು ಸಮತೋಲನವು ನಿರಂತರವಾಗಿ ಅಪಾಯಕ್ಕೊಳಗಾಗುತ್ತಾ ಬರುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಶ್ರವಣ್, “ನಾನು ಸಣ್ಣವನಿದ್ದಾಗ ನನ್ನ ಪುಸ್ತಕಗಳನ್ನು ಹೊರಗೆ ತೆಗೆದುಕೊಂಡು ಹೋಗಿ, ನಮ್ಮ ಹೊಲದಲ್ಲಿ ಅಧ್ಯಯನ ಮಾಡುತ್ತಿದ್ದೆ. ಆಗ ಜಿಂಕೆಗಳು ಮನುಷ್ಯರೊಂದಿಗೆ ಒಡನಾಡುವುದು ತೀರಾ ಸಾಮಾನ್ಯ ಸಂಗತಿಯಾಗಿತ್ತು. ನಾನು ಅಂದು ಮತ್ತು ಇಂದೂ ಕೂಡಾ ಅವುಗಳನ್ನು ಬೆದರಿಸಿ ಓಡಿಸುತ್ತೇನೆ. ಆದರೆ, ಇಂದು ನನ್ನ ಮಕ್ಕಳು ಜಿಂಕೆಯನ್ನು ನೋಡಬೇಕೆಂದರೆ, ವನ್ಯಜೀವಿ ಧಾಮ ಅಥವಾ ಮೃಗಾಲಯಕ್ಕೆ ಭೇಟಿ ನೀಡಬೇಕು. ನಾವು ನಮ್ಮ ಹೊಲಗಳನ್ನು ಅನಾಥವಾಗಿ ಬಿಟ್ಟಿರುವುದರಿಂದ ಅವುಗಳು ಇನ್ನೆಂದೂ ಅಲ್ಲಿಗೆ ಬರುವುದಿಲ್ಲ” ಎಂದು ಹೇಳುತ್ತಾರೆ.
ಈ ಗ್ರಾಮದ ಬಯಲು ಸೀಮೆ ಹಾಗೂ ಹುಲ್ಲುಗಾವಲುಗಳಲ್ಲಿ ಕೃಷ್ಣ ಮೃಗ, ಭಾರತೀಯ ಕಾಡು ಕೋಳಿ ಹಾಗೂ ತೋಳಗಳಂಥ ಪ್ರಭೇದಗಳು ಕೂಡಾ ಮುಕ್ತವಾಗಿ ತಿರುಗುತ್ತಿದ್ದವು. ವಿಷಾದಕರ ಸಂಗತಿಯೆಂದರೆ, ಈ ಪೈಕಿ ಅನೇಕ ಪ್ರಾಣಿಗಳ ಸಂಖ್ಯೆ ಆತಂಕಕಾರಿ ಪ್ರಮಾಣದಲ್ಲಿ ಕ್ಷೀಣಿಸಿದೆ. ಒಂದು ಕಾಲದಲ್ಲಿ ಈ ಪ್ರದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದ ತೋಳಗಳು ಅಕ್ಷರಶಃ ನಾಶಗೊಂಡಿವೆ. ಆದರೆ, ವನ್ಯಜೀವಿ ಕಾಯ್ದೆ, 1972ರ ಅಡಿ ಕಾಡು ಕೋಳಿಗಳನ್ನು ಮಾತ್ರ ಸಂರಕ್ಷಿಸಲಾಗಿದ್ದು, ಈ ಪಕ್ಷಿಯನ್ನು ಪೇಟಾವು ತೀರಾ ದುರ್ಬಲ ಪ್ರಭೇದ ಎಂದು ಪಟ್ಟಿ ಮಾಡಿದೆ.
ಈ ಪ್ರಾಂತ್ಯದ ವನ್ಯಜೀವಿಗಳ ಬಿಕ್ಕಟ್ಟಿಗೆ ಗಮನಾರ್ಹ ಕೊಡುಗೆ ನೀಡುತ್ತಿರುವುದು ಜೋಧ್ ಪುರ್ ನಿಂದ ನೈರುತ್ಯ ದಿಕ್ಕಿಗೆ ಹರಿಯುವ, 83 ಕಿಮೀ ಉದ್ದ ಹರಡಿಕೊಂಡಿರುವ ಜೋಜ್ರಿ ನದಿಯ ಮಾಲಿನ್ಯ. ಈ ನದಿಯು ಕೈಗಾರಿಕೆಗಳ ರಾಸಾಯನಿಕ ತ್ಯಾಜ್ಯ ಹಾಗೂ ಗೃಹಕೃತ್ಯ ಮೂಲದ ಕೊಳಚೆ ನೀರು – ಈ ಎರಡರಿಂದಲೂ ಕಲುಷಿತಗೊಂಡಿದೆ. ಈ ಪರಿಸ್ಥಿತಿಯು ವನ್ಯಜೀವಿಗಳಿಗೆ, ನಿರ್ದಿಷ್ಟವಾಗಿ ಕುಡಿಯುವ ನೀರಿಗಾಗಿ ನದಿಯನ್ನು ಅವಲಂಬಿಸಿರುವ ಪ್ರಾಣಿಗಳ ಪಾಲಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.
“ಕಾಡು ಕೋಳಿಗಳು ಕಲುಷಿತ ನೀರನ್ನು ಸೇವಿಸುತ್ತಿವೆ ಎಂಬ ಸಂಗತಿ ನಮಗೆ ತಿಳಿದಿದೆ. ಹೀಗಾಗಿ, ನಾವು ಕೆಲವು ನೀರಿನ ಹೊಂಡಗಳನ್ನು ನಿರ್ಮಿಸುವ ಮೂಲಕ ಅದನ್ನು ತಡೆಯಲು ಪ್ರಯತ್ನಿಸಿದೆವು. ಆದರೆ, ಕಾಡು ಕೋಳಿಗಳಿಗೆ ನದಿ ನೀರಿನ ಸೇವನೆ ಅಭ್ಯಾಸವಾಗಿ ಹೋಗಿರುವುದರಿಂದ, ಅವು ಮತ್ತೆ ಕಲುಷಿತ ನೀರನ್ನು ಕುಡಿಯಲೇ ಹೋಗುತ್ತಿವೆ” ಎಂದು ಶ್ರವಣ್ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
“ಈ ಪರಿಸ್ಥಿತಿಯು ಗಾಯಗೊಂಡ ಕಾಡು ಕೋಳಿಗಳ ಮೇಲೆ ಈ ಪ್ರದೇಶದಲ್ಲಿರುವ ಏಕೈಕ ಮಾಂಸಾಹಾರಿ ಪ್ರಾಣಿಯಾದ ಕಾಡು ನಾಯಿಗಳು ದಾಳಿ ಮಾಡುವ ಮೂಲಕ ಮತ್ತಷ್ಟು ವಿಷಮಿಸಿತು. ವನ್ಯಜೀವಿಗಳು ಇಲ್ಲಿ ಬದುಕುಳಿದಿರುವುದೇ ಕೃಷಿ ಭೂಮಿಗಳಲ್ಲಿ ದೊರೆಯುವ ಆಹಾರ ಮತ್ತು ಆಶ್ರಯದಿಂದಾಗಿ. ಆದರೆ, ಇದೀಗ ಬೆಳೆಗಳನ್ನು ರಕ್ಷಿಸಲು ಈ ಕೃಷಿ ಭೂಮಿಗಳಿಗೆ ತಂತಿ ಬೇಲಿಗಳನ್ನು ಅಳವಡಿಸಲಾಗಿದೆ. ಈ ಬೇಲಿಗಳಿಂದಾಗಿ ಪ್ರಾಣಿಗಳು ಗಾಯಗೊಳ್ಳುತ್ತಿವೆ. ಕಾಡು ಕೋಳಿಗಳು ಪದೇ ಪದೇ ತಂತಿ ಬೇಲಿಯಲ್ಲಿ ಸಿಕ್ಕಿಕೊಂಡ, ಗಾಯಗೊಂಡ ಸ್ಥಿತಿಯಲ್ಲಿ ಕಂಡು ಬರುತ್ತಿದ್ದು, ಅವು ಅಲ್ಲಿ ಸಿಲುಕಿಕೊಳ್ಳುವುದರಿಂದಾಗಿ, ಅವು ಕಾಡು ನಾಯಿಗಳ ದಾಳಿಗೆ ಸಿಲುಕುತ್ತಿವೆ. ಇದರಿಂದಾಗಿ ಗಾಯಗಳು ಹಾಗೂ ಮೃತ್ಯವಿನ ಪ್ರಮಾಣ ಏರಿಕೆಯಾಗುತ್ತಿದ್ದು, ಈಗಾಗಲೇ ದುರ್ಬಲವಾಗಿರುವ ಪ್ರಭೇದಗಳಿಗೆ ಅಪಾಯ ಎದುರಾಗಿದೆ” ಎಂದು ಶ್ರವಣ್ ವಿವರಿಸುತ್ತಾರೆ.
ಈ ಎಲ್ಲ ಸವಾಲುಗಳನ್ನು ಎದುರಿಸಲು ಶ್ರವಣ್ ಮತ್ತು ಅವರ ತಂಡವು ಜನರಿಗೆ ಮಾಹಿತಿ ನೀಡುವ, ಅವರನ್ನು ಸೂಕ್ಷ್ಮಜ್ಞರನ್ನಾಗಿಸುವ ಕೆಲಸದಲ್ಲಿ ತೊಡಗಿಕೊಂಡಿತು. ಗಾಯಗೊಂಡ ಪ್ರಾಣಿಯ ಬಗ್ಗೆ ಅವರು ಕರೆ ಸ್ವೀಕರಿಸಿದಾಗಲೆಲ್ಲ ಗ್ರಾಮದಲ್ಲಿ ವಾಸಿಸುತ್ತಿರುವ ಹಾಗೂ ಆಸುಪಾಸಿನ ಜನರಿಗೆ ಈ ಕುರಿತು ಮಾಹಿತಿ ನೀಡುತ್ತಿದ್ದರು. ಹೊಲದ ಮಾಲಕರಿಗೆ ತಂತಿ ಬೇಲಿಯಿಂದ ತೊಂದರೆಗೊಳಗಾಗಿರುವ ಪ್ರಾಣಿಗಳ ಚಿತ್ರಗಳು ಹಾಗೂ ವಿಡಿಯೊಗಳನ್ನು ತೋರಿಸತೊಡಗಿತು. ಬೇಲಿ ಹಾಕುವುದರಿಂದ ಆಗಿರುವ ದುಷ್ಪರಿಣಾಮಗಳ ಕುರಿತು ಅವರಿಗೆ ತಿಳಿಯುವಂತೆ ಮಾಡುವ ಮೂಲಕ, ಅವರು ಅದರ ಹೊಣೆ ಹೊರುವಂತೆ ಮಾಡತೊಡಗಿತು.
ಇದರೊಂದಿಗೆ ಹೊಲಗಳಲ್ಲಿ ಹಸಿರಿನ ಮರು ಹೊದಿಕೆ ಸೃಷ್ಟಿಸುವ ಪ್ರಯತ್ನಕ್ಕೆ ಚಾಲನೆ ನೀಡಿದ ಶ್ರವಣ್ ಮತ್ತು ತಂಡವು, ವಿದೇಶಿ ನೀಲಗಿರಿ ಪ್ರಭೇದಗಳನ್ನು ಕಡಿದು, ಹುಲ್ಲುಗಾವಲುಗಳನ್ನು ನಿರ್ಮಿಸಲು ಆ ಜಾಗದಲ್ಲಿ ಸ್ಥಳೀಯ ಹುಲ್ಲುಗಳನ್ನು ನೆಟ್ಟಿತು. ಈ ತಂಡವು ಬೋರೆ ಹಣ್ಣು, ಖೇಜ್ರಿ ಹಾಗೂ ಕುಮಟಿಯದಂಥ ಈ ಪ್ರಾಂತ್ಯಕ್ಕೆ ಸ್ಥಳೀಯವಾದ ಗಿಡಗಳನ್ನು ನೆಟ್ಟಿತು. “ಚಿಂಕಾರಗಳು ಹಾಗೂ ಕಾಡು ಕೋಳಿಗಳು ಬೋರೆ ಹಣ್ಣನ್ನು ಹೆಚ್ಚು ಇಷ್ಟಪಡುತ್ತವೆ. ಹೀಗಾಗಿ ನಾವು ಓರಾನ್ ಹೊಲಗಳಲ್ಲಿ ಈ ಗಿಡಗಳನ್ನು ಪ್ರತಿ ವರ್ಷ ನೆಡುತ್ತೇವೆ” ಎಂದು ಶ್ರವಣ್ ಹೇಳುತ್ತಾರೆ. (ಓರಾನ್ ಪವಿತ್ರ ಹಾಗೂ ಸಮುದಾಯ ಸಂರಕ್ಷಿತ ಭೂಮಿಯಾಗಿದೆ).
ತಮ್ಮ ಕೆಲಸಗಳಿಗೆ ದೀರ್ಘಕಾಲ ನಿಧಿ ಸಂಗ್ರಹಿಸಲು “ವನ್ಯಜೀವಿ ಸಂರಕ್ಷಣೆಗಾಗಿ ಒಂದು ದಿನಕ್ಕೆ ಒಂದು ರೂಪಾಯಿ” ಎಂಬ ವಾಟ್ಸ್ ಆ್ಯಪ್ ಗುಂಪನ್ನು ಪ್ರಾರಂಭಿಸಿತು. ಈ ಉಪಕ್ರಮಕ್ಕೆ ಜನರಿಂದ ತಕ್ಷಣವೇ ಸ್ಪಂದನೆ ದೊರೆತಿದ್ದು, ಈ ಗುಂಪಿನಲ್ಲಿರುವ 1,000 ಮಂದಿ ಸದಸ್ಯರು ಪ್ರತಿ ವರ್ಷ ರೂ. 365 ರೂಪಾಯಿ ದೇಣಿಗೆ ನೀಡುತ್ತಿದ್ದಾರೆ.
ಶ್ರವಣ್ ಕ್ಷೇತ್ರ ಕಾರ್ಯ ಮಾಡುವ ಮೂಲಕ ವನ್ಯಜೀವಿ ಸಂರಕ್ಷಣೆ ಹಾಗೂ ಕೃಷಿಯ ಪೂರ್ಣಕಾಲಿಕ ಉದ್ಯೋಗವನ್ನು ಸರಿದೂಗಿಸುತ್ತಿದ್ದಾರೆ. “ಅದೃಷ್ಟವಶಾತ್, ನನಗೆ ಐದು ದಿನಗಳ ವಾರದ ಕೆಲಸವಿದ್ದು, ವಾರಾಂತ್ಯಗಳಲ್ಲಿ ನಾನು ಈ ಕೆಲಸ ಹೆಚ್ಚು ಮಾಡುತ್ತೇನೆ. ಆದರೆ, ನನ್ನ ಕೆಲಸವು ಕ್ಷೇತ್ರಕಾರ್ಯವಾಗಿದ್ದು, ಜನರೊಂದಿಗೆ ಹೆಚ್ಚು ಸಂವಾದ ನಡೆಸುವುದರಿಂದ, ವನ್ಯಜೀವಿ ಸಂರಕ್ಷಣೆ ವಿಚಾರದಲ್ಲಿ ನಾವೇನು ಮಾಡುತ್ತಿದ್ದೇವೆ ಎಂಬುದನ್ನು ಹೆಚ್ಚು ಅರ್ಥ ಮಾಡಿಕೊಳ್ಳಲು ಅದೂ ಕೂಡಾ ನೆರವು ನೀಡಿದೆ. ಆದರೆ, ನಾನಿಲ್ಲದಾಗ, ನನ್ನ ಸ್ನೇಹಿತರಾದ ಜಗದೀಶ್ ಹಾಗೂ ರಾಧೇಶ್ಯಾ ಮ್ ಎಲ್ಲದರ ಉಸ್ತುವಾರಿಯನ್ನು ನೋಡಿಕೊಳ್ಳುತ್ತಾರೆ” ಎಂದು ಅವರು ಹೇಳುತ್ತಾರೆ.
ಶ್ರವಣ್ ಸ್ನೇಹಿತರಾದ ಜಗದೀಶ್ ಹಾಗೂ ರಾಧೇಶ್ಯಾಮ್ ಕೂಡಾ ಪೂರ್ಣಕಾಲಿಕ ಉದ್ಯೋಗಿಗಳಾಗಿದ್ದು, ಶ್ರವಣ್ ರ ವನ್ಯಜೀವಿ ಸಂರಕ್ಷಣೆ ಪ್ರಯತ್ನಕ್ಕೆ ಹೆಗಲು ನೀಡಿದ್ದಾರೆ.
“ಜಿಂಕೆಗಳು ಯಾವಾಗಲೂ ಈ ಪರಿಸರದ ಭಾಗವಾಗಿದ್ದವು. ರೈತ ಸಮುದಾಯ ಮತ್ತು ಹೊಲಗಳೊಂದಿಗೆ ಸಹ ಜೀವನ ನಡೆಸುತ್ತಿದ್ದವು. ಆದರೆ, ಇದೀಗ ಕಣ್ಮರೆಯಾಗಿರುವಂತೆ ಕಂಡು ಬರುತ್ತಿದೆ” ಎಂದು ಶ್ರವಣ್ ಬೇಸರ ವ್ಯಕ್ತಪಡಿಸುತ್ತಾರೆ.
“ವನ್ಯಜೀವಿ ಧಾಮವೊಂದು 5,000 ಜಿಂಕೆಗಳನ್ನು ಹೊಂದಿದ್ದರೂ ಅದು ನನಗೆ ಮುಖ್ಯವಲ್ಲ. ಬದಲಿಗೆ ನಾನು ವಾಸಿಸುತ್ತಿರುವ ಸ್ಥಳವು ಈ ಹಿಂದಿನಂತೆ ಆರೋಗ್ಯಕರ ಪರಿಸರವಾಗಬೇಕು ಎಂಬುದು ನನ್ನ ಬಯಕೆಯಾಗಿದೆ” ಎಂದು ಹೇಳಲು ಅವರು ಮರೆಯುವುದಿಲ್ಲ.
ಸೌಜನ್ಯ: thebetterindia.com