ʼದೇವರನ್ನು ರಾಜಕೀಯದಿಂದ ಹೊರಗಿಡಬೇಕುʼ: ತಿರುಪತಿ ಲಡ್ಡು ಕುರಿತ ಆಂಧ್ರ ಸಿಎಂ ಹೇಳಿಕೆಗೆ ಸುಪ್ರೀಂ ತರಾಟೆ
ಹೊಸದಿಲ್ಲಿ: ʼದೇವರನ್ನು ರಾಜಕೀಯದಿಂದ ಹೊರಗಿಡಬೇಕು, ಧರ್ಮದ ಜೊತೆ ರಾಜಕೀಯವನ್ನು ಬೆರೆಸಲು ಅನುಮತಿಸುವುದಿಲ್ಲʼ ಎಂದು ತಿರುಪತಿ ಲಡ್ಡು ಕುರಿತ ವಿವಾದಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್ ಮಹತ್ವದ ಹೇಳಿಕೆಯನ್ನು ನೀಡಿದೆ.
ಆಂಧ್ರಪ್ರದೇಶದ ತಿರುಪತಿ ದೇವಸ್ಥಾನದಲ್ಲಿ ಪ್ರಸಾದವಾಗಿ ನೀಡುವ ಲಡ್ಡಿಗೆ ಪ್ರಾಣಿಗಳ ಕೊಬ್ಬು ಬಳಕೆ ಮಾಡಲಾಗಿದೆ ಎಂಬ ಆರೋಪದ ಕುರಿತ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಈ ಹೇಳಿಕೆ ನೀಡಿದೆ.
ಈ ಕುರಿತು ತೀಕ್ಷ್ಣವಾದ ಅವಲೋಕನಗಳನ್ನು ನಡೆಸಿದ ಸುಪ್ರೀಂಕೋರ್ಟ್, ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ಕುರಿತ ಪುರಾವೆಗಳ ಕೊರತೆಯನ್ನು ಕೂಡ ಗಮನಿಸಿದೆ.
ಈ ವಿವಾದಾತ್ಮಕ ವಿಷಯದ ಕುರಿತು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಸಾರ್ವಜನಿಕವಾಗಿ ಹೇಳಿಕೆ ಕೊಟ್ಟ ಬಗ್ಗೆ ನ್ಯಾಯಾಲಯವು ಅಸಮಾಧಾನ ವ್ಯಕ್ತಪಡಿಸಿದೆ.
ʼನೀವು ಸಾಂವಿಧಾನಿಕ ಹುದ್ದೆ(ಮುಖ್ಯಮಂತ್ರಿ)ಯನ್ನು ಹೊಂದಿರುವಾಗ, ದೇವರನ್ನು ರಾಜಕೀಯದಿಂದ ದೂರವಿಡಬೇಕೆಂದು ನಾವು ನಿರೀಕ್ಷಿಸುತ್ತೇವೆ, ನೀವು ಈಗಾಗಲೇ ತನಿಖೆಗೆ ಆದೇಶಿಸಿದ್ದರೆ, ಪತ್ರಿಕೆಗೆ ಹೋಗಿ ಹೇಳಿಕೆ ನೀಡುವ ಅಗತ್ಯವೇನು? ಜುಲೈನಲ್ಲಿ ಲ್ಯಾಬ್ ವರದಿ ಬಂದಿದೆ. ನಿಮ್ಮ ಹೇಳಿಕೆ ಸೆಪ್ಟೆಂಬರ್ನಲ್ಲಿ ಬಂದಿದೆ ಮತ್ತು ಲ್ಯಾಬ್ ವರದಿಯು ಸ್ಪಷ್ಟವಾಗಿಲ್ಲ ಎಂದು ಕೋರ್ಟ್ ಹೇಳಿದೆ.
ನ್ಯಾಯಮೂರ್ತಿ ಬಿ.ಆರ್.ಗವಾಯಿ ಮತ್ತು ನ್ಯಾಯಮೂರ್ತಿ ಕೆ.ವಿ.ವಿಶ್ವನಾಥನ್ ಅವರ ಪೀಠವು ತಿರುಪತಿ ಲಡ್ಡು ಕುರಿತ ಆಂಧ್ರ ಸಿಎಂ ಚಂದ್ರ ಬಾಬು ನಾಯ್ಡು ಹೇಳಿಕೆ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದೆ.