‘ಸೈಬರ್ ಗುಲಾಮಗಿರಿ’ ವರದಿಗಳ ನಡುವೆ 2.17 ಕೋಟಿ ಮೊಬೈಲ್ ಸಂಪರ್ಕ ಕಡಿತಗೊಳಿಸಲಿರುವ ದೂರಸಂಪರ್ಕ ಸಚಿವಾಲಯ

Update: 2024-09-30 12:33 GMT

ಸಾಂದರ್ಭಿಕ ಚಿತ್ರ 

ಹೊಸದಿಲ್ಲಿ: ನಕಲಿ ದಾಖಲೆಗಳ ಮೂಲಕ ಪಡೆದಿರುವ ಅಥವಾ ಸೈಬರ್ ಅಪರಾಧದಲ್ಲಿ ದುರ್ಬಳಕೆಯಾಗಿರುವ ಸುಮಾರು 2.17 ಕೋಟಿ ಮೊಬೈಲ್ ಸಂಪರ್ಕಗಳನ್ನು ಕಡಿತಗೊಳಿಸುವುದಾಗಿ ಮತ್ತು 2.26 ಲಕ್ಷ ಹ್ಯಾಂಡ್‌ಸೆಟ್‌ಗಳನ್ನು ನಿರ್ಬಂಧಿಸುವುದಾಗಿ ಕೇಂದ್ರ ದೂರಸಂಪರ್ಕ ಸಚಿವಾಲಯವು ಕೇಂದ್ರದ ಉನ್ನತ ಮಟ್ಟದ ಅಂತರ್-ಸಚಿವಾಲಯ ಸಮಿತಿಗೆ ಮಾಹಿತಿ ನೀಡಿದೆ ಎಂದು indianexpress.com ವರದಿ ಮಾಡಿದೆ.

5,000ಕ್ಕೂ ಅಧಿಕ ಭಾರತೀಯರು ಕಾಂಬೋಡಿಯಾದಲ್ಲಿ ‘ಸೈಬರ್ ಗುಲಾಮಗಿರಿ’ಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆಂದು ಶಂಕಿಸಲಾಗಿದೆ. ಲಾಭದಾಯಕ ಡೇಟಾ ಎಂಟ್ರಿ ಉದ್ಯೋಗದ ಆಮಿಷದೊಂದಿಗೆ ಅಲ್ಲಿಗೆ ತೆರಳಿದ್ದ ಅವರ ಪಾಸ್‌ಪೋರ್ಟ್‌ಗಳನ್ನು ಕಿತ್ತುಕೊಂಡು ಅವರನ್ನು ದಿಗ್ಬಂಧನದಲ್ಲಿರಿಸಲಾಗಿದ್ದು, ಸೈಬರ್ ವಂಚನೆಗಳನ್ನು ಎಸಗಲು ಅವರನ್ನು ಬಲವಂತಗೊಳಿಸಲಾಗಿದೆ ಎಂದು ಮಾಧ್ಯಮಗಳು ಕಳೆದ ಮಾರ್ಚ್‌ನಲ್ಲಿ ವರದಿ ಮಾಡಿದ್ದವು. ಸರಕಾರದ ಅಂದಾಜುಗಳ ಪ್ರಕಾರ ಈ ವರ್ಷದ ಮಾರ್ಚ್‌ಗೆ ಮುನ್ನ ಆರು ತಿಂಗಳ ಅವಧಿಯಲ್ಲಿ ಭಾರತೀಯರು ಸೈಬರ್ ವಂಚನೆಗಳಲ್ಲಿ ಕನಿಷ್ಠ 500 ಕೋಟಿ ರೂ.ಗಳನ್ನು ಕಳೆದುಕೊಂಡಿದ್ದಾರೆ. ವಿಷಯವನ್ನು ಪರಿಶೀಲಿಸಲು ಮತ್ತು ಲೋಪದೋಷಗಳನ್ನು ಗುರುತಿಸಲು ಸರಕಾರವು ಆಗ ಅಂತರ್-ಸಚಿವಾಲಯ ಸಮಿತಿಯನ್ನು ರಚಿಸಿತ್ತು. ಬ್ಯಾಂಕಿಂಗ್,ವಲಸೆ ಮತ್ತು ದೂರಸಂಪರ್ಕ ವಲಯಗಳಲ್ಲಿ ಲೋಪಗಳನ್ನು ಸಮಿತಿಯು ಗುರುತಿಸಿದೆ ಎನ್ನಲಾಗಿದೆ.

ಈ ತಿಂಗಳ ಆರಂಭದಲ್ಲಿ ನಡೆದಿದ್ದ ಅಂತರ್-ಸಚಿವಾಲಯ ಸಮಿತಿ ಸಭೆಯಲ್ಲಿ ದೂರಸಂಪರ್ಕ ಇಲಾಖೆ(ಡಾಟ್)ಯು,ಸಿಮ್ ಕಾರ್ಡ್‌ಗಳ ಖರೀದಿಗಾಗಿ‘ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ (ಕೆವೈಸಿ)’ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ತಾನು ಹಲವಾರು ಕ್ರಮಗಳನ್ನು ತೆಗೆದುಕೊಂಡಿರುವುದಾಗಿಯೂ ತಿಳಿಸಿತ್ತು.

ಕಳೆದ ಮೇ ತಿಂಗಳಿನಲ್ಲಿ ಡಾಟ್ ಭಾರತೀಯ ಮೊಬೈಲ್ ಸಂಖ್ಯೆಗಳನ್ನು ಪ್ರದರ್ಶಿಸುವ ಎಲ್ಲ ಒಳಬರುವ ಅಂತರರಾಷ್ಟ್ರೀಯ ವಂಚನೆ ಕರೆಗಳನ್ನು ನಿರ್ಬಂಧಿಸುವಂತೆ ದೂರಸಂಪರ್ಕ ಕಂಪನಿಗಳಿಗೆ ನಿರ್ದೇಶನ ನೀಡಿತ್ತು.

ಈಗ ಶೇ.35ರಷ್ಟು ಇಂತಹ ಕರೆಗಳನ್ನು ನಿರ್ಬಂಧಿಸಲಾಗುತ್ತಿದ್ದು,ಈ ವರ್ಷದ ಡಿ.31ರೊಳಗೆ ಇದು ಸಂಪೂರ್ಣವಾಗಿ ಕಾರ್ಯಗತಗೊಳ್ಳಲಿದೆ ಎಂದು ಡಾಟ್ ಸಭೆಯಲ್ಲಿ ತಿಳಿಸಿತ್ತು.

ದಕ್ಷಿಣ ಏಶ್ಯಾ ಪ್ರದೇಶದಲ್ಲಿ ವಂಚನೆಗಳಲ್ಲಿ ತೊಡಗಿಕೊಂಡಿರುವ ರೋಮಿಂಗ್ ಫೋನ್ ಸಂಖ್ಯೆಗಳನ್ನು ಗುರುತಿಸಲು ಹಾಂಗ್‌ಕಾಂಗ್, ಕಾಂಬೋಡಿಯಾ,ಲಾವೋಸ್,ಫಿಲಿಪ್ಪೀನ್ಸ್ ಮತ್ತು ಮ್ಯಾನ್ಮಾರ್‌ಗಳಲ್ಲಿ ರೋಮಿಂಗ್ ಸೌಲಭ್ಯದಡಿಯಲ್ಲಿರುವ ಭಾರತೀಯ ಮೊಬೈಲ್ ಸಂಖ್ಯೆಗಳಿಗಾಗಿ ದತ್ತಾಂಶವನ್ನು ಪ್ರತಿವಾರ ಒದಗಿಸುವಂತೆ ಎಲ್ಲ ದೂರಸಂಪರ್ಕ ಕಂಪನಿಗಳಿಗೆ ಸೂಚಿಸಲಾಗಿದೆ ಎಂದೂ ಡಾಟ್ ಸಭೆಯಲ್ಲಿ ತಿಳಿಸಿತ್ತು.

ಡಾಟ್ ಸ್ವೀಕರಿಸಿರುವ ಮಾಹಿತಿಯಂತೆ ದಕ್ಷಿಣ ಏಶ್ಯಾ ಪ್ರದೇಶದಲ್ಲಿ ರೋಮಿಂಗ್‌ನಲ್ಲಿರುವ ಭಾರತೀಯ ಸಿಮ್ ಕಾರ್ಡ್‌ಗಳ ಒಟ್ಟು ಸಂಖ್ಯೆ ಈ ವರ್ಷದ ಎಪ್ರಿಲ್-ಜೂನ್ ಅವಧಿಯಲ್ಲಿ ಆರು ಲ.ಕ್ಕೂ ಅಧಿಕವಿತ್ತು. 1.4 ಲಕ್ಷಕ್ಕೂ ಅಧಿಕ ಪಾಯಿಂಟ್ ಆಫ್ ಸೇಲ್(ಪಿಒಎಸ್) ಏಜೆಂಟರು ಭಾರತದಾದ್ಯಂತ ಈ ಸಿಮ್ ಕಾರ್ಡ್‌ಗಳ ಮಾರಾಟದಲ್ಲಿ ತೊಡಗಿಕೊಂಡಿದ್ದಾರೆ. ನಂತರ ದಕ್ಷಿಣ ಏಶ್ಯಾದಲ್ಲಿ ವಂಚನೆಗಳಲ್ಲಿ ಬಳಕೆಯಾಗುವ ಭಾರತೀಯ ಸಿಮ್ ಕಾರ್ಡ್‌ಗಳ ಮಾರಾಟದಲ್ಲಿ ತೊಡಗಿರುವ ಈ ಪಿಒಎಸ್ ಏಜೆಂಟರ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ತೆಗೆದುಕೊಳ್ಳುವಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೋಲಿಸರಿಗೆ ಸೂಚಿಸಲಾಗಿದೆ ಎಂದೂ ಡಾಟ್ ಸಭೆಯಲ್ಲಿ ತಿಳಿಸಿತ್ತು.

ಭಾರತೀಯರನ್ನು ಗುರಿಯಾಗಿಸಿಕೊಂಡು ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದ್ದು, ಇಂತಹ ಸುಮಾರು ಶೇ.45ರಷ್ಟು ವಂಚನೆಗಳಿಗೆ ಆಗ್ನೇಯ ಏಶ್ಯಾ ಮೂಲವಾಗಿದೆ ಎಂದು ಗೃಹ ಸಚಿವಾಲಯದ ಅಧೀನದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರವು ನಡೆಸಿರುವ ವಿಶ್ಲೇಷಣೆಯಲ್ಲಿ ಬಹಿರಂಗಗೊಂಡಿದೆ. 2023 ಜನವರಿಯಿಂದ ಸುಮಾರು ಒಂದು ಲಕ್ಷ ದೂರುಗಳು ನ್ಯಾಷನಲ್ ಸೈಬರ್ ಕ್ರೈಂ ರಿಪೋರ್ಟಿಂಗ್ ಪೋರ್ಟಲ್‌ನಲ್ಲಿ ದಾಖಲಾಗಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News