ಬಿಜೆಪಿ ಸರಕಾರವನ್ನು ಕಿತ್ತೊಗೆಯಿರಿ : ಪ್ರಿಯಾಂಕಾ ಗಾಂಧಿ

Update: 2024-09-30 14:51 GMT

ಪ್ರಿಯಾಂಕಾ ಗಾಂಧಿ | PC : PTI

ಅಂಬಾಲ : ಹರ್ಯಾಣ ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಲ್ಲಿ ಸೋಮವಾರ ಸಾರ್ವಜನಿಕ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ದೇಶದ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರ ಹರ್ಯಾಣದ ಜನರಿಗಾಗಿ ಏನನ್ನೂ ಮಾಡುತ್ತಿಲ್ಲ. ಆದುದರಿಂದ ಬಿಜೆಪಿ ಸರಕಾರವನ್ನು ಅಧಿಕಾರದಿಂದ ಕಿತ್ತೊಗಿಯಿರಿ ಎಂದಿದ್ದಾರೆ.

ಅಂಬಾಲದ ನರೈಂಗರಾಹ್‌ನಲ್ಲಿ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಿಯಾಂಕಾ ಗಾಂಧಿ, ‘‘ಇಡೀ ದೇಶದಲ್ಲಿ ರೈತರು, ಕ್ರೀಡಾಪಟುಗಳು ಹಾಗೂ ಯೋಧರಿಗೆ ಅತ್ಯುಚ್ಚ ಗೌರವ ನೀಡಲಾಗುತ್ತದೆ. ಆದರೆ, ಬಿಜೆಪಿ ಅವರನ್ನು ಯಾವಾಗಲೂ ಅವಮಾನಿಸಿದೆ. ಕಳೆದ 10 ವರ್ಷಗಳಲ್ಲಿ ರೈತರು ದೇಶಕ್ಕಾಗಿ ಏನು ಮಾಡಿದರೂ ಅವರ ಮೇಲೆ ಲಾಠಿ ಪ್ರಹಾರ ನಡೆಸಲಾಗಿದೆ. ಅವರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ. ಅವರಿಗೆ ಕನಿಷ್ಠ ಬೆಂಬಲ ಬೆಲೆ ನೀಡಿಲ್ಲ. ಹರ್ಯಾಣದ ಜನರಿಗೆ ಬಿಜೆಪಿ ಏನು ಮಾಡಿದೆ? ನಮ್ಮ ಕುಸ್ತಿಪಟುಗಳನ್ನು ಹೇಗೆ ನಡೆಸಿಕೊಂಡರು ಎಂಬುದು ನಿಮಗೆಲ್ಲರಿಗೂ ಗೊತ್ತಿದೆ. ಅವರು ರಸ್ತೆಯಲ್ಲೇ ಕುಳಿತುಕೊಳ್ಳುವಂತೆ ಮಾಡಿದರು. ಪ್ರತಿಭಟನೆ ನಡೆಸುವಂತೆ ಮಾಡಿದರು. ಕಷ್ಟಪಟ್ಟು ದುಡಿಯುವ ಹರ್ಯಾಣದ ಮಕ್ಕಳಿಗೆ ಏನೂ ಸಿಕ್ಕಿಲ್ಲ’’ ಎಂದು ಅವರು ಹೇಳಿದರು.

ನಮ್ಮ ಕುಸ್ತಿ ಪಟುಗಳಿಗಾಗಿ ಅವರು ಏನು ಮಾಡಿದ್ದಾರೆ? ಕುಸ್ತಿಪಟುಗಳು ರಸ್ತೆಯಲ್ಲಿ ಕುಳಿತುಕೊಂಡು ಧರಣಿ ನಡೆಸುವಂತೆ ಮಾಡಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರನ್ನು 5 ನಿಮಿಷ ಕೂಡ ಭೇಟಿಯಾಗಿಲ್ಲ. ಅಲ್ಲದೆ, ಇತ್ತೀಚೆಗೆ ಒಲಿಂಪಿಕ್ಸ್‌ನಲ್ಲಿ ಏನು ನಡೆದಿದೆ ಎಂಬುದು ನಿಮಗೆಲ್ಲಾ ತಿಳಿದಿದೆ. ನೀವು ಹೋರಾಟ ಮಾಡುವ ಜನರು. ನಿಮಗೆ ಸ್ವಾಭಿಮಾನವಿದೆ. ನೀವು ಹಣದುಬ್ಬರದ ವಿರುದ್ಧ ಹೋರಾಡಬೇಕು. ಸರಕಾರ ನಿಮಗಾಗಿ ಏನನ್ನೂ ಮಾಡಲಾರದು. ಇಂದು ನೀವು ಆತ್ಮ ಗೌರವದಿಂದ ಜೀವಿಸಲು ಬಯಸುವುದಾದರೆ, ನಿಮಗೆ ನ್ಯಾಯ ಬೇಕಾದರೆ, ನೀವು ಈ ಸರಕಾರವನ್ನು ಕಿತ್ತೊಗೆಯಿರಿ ಎಂದು ಅವರು ಹೇಳಿದರು.

ಸರಕಾರದ ಕಾರಣಕ್ಕೆ ಇಂದು ಹರ್ಯಾಣದಲ್ಲಿ ನಿರೋದ್ಯೋಗ ಏರಿಕೆಯಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಪ್ರಸಕ್ತ ಸರಕಾರದ ಕಾರಣದಿಂದ ನಿಮ್ಮ ಭವಿಷ್ಯ ಕತ್ತಲಾಗುವುದನ್ನು ನೀವು ಕಾಣಬಹುದು. ಆದರೆ, ಅವರು ತಾವು ಏನು ಮಾಡುವುದು ಎನ್ನುತ್ತಿದ್ದಾರೆ. ರೈತರು, ಕುಸ್ತಿಪಟುಗಳು ಹಾಗೂ ಯುವಕರು ಯಾಕೆ ಸಮಸ್ಯೆ ಎದುರಿಸುತ್ತಿದ್ದಾರೆ. ಹಗರಣಗಳು ಮಾತ್ರ ನಡೆಯುತ್ತಿವೆ ಯಾಕೆ ಎಂದು ಪ್ರಿಯಾಂಕಾ ಗಾಂಧಿ ಪ್ರಶ್ನಿಸಿದರು

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News