ನಗರಗಳಲ್ಲಿ ಶೇ.92ರಷ್ಟು ಒಳಚರಂಡಿ, ಸೆಪ್ಟಿಕ್ ಟ್ಯಾಂಕ್‌ಗಳ ಸ್ವಚ್ಛತಾ ಕಾರ್ಮಿಕರು ಎಸ್‌ಸಿ, ಎಸ್‌ಟಿ, ಒಬಿಸಿ ಗುಂಪುಗಳಿಗೆ ಸೇರಿದವರು

Update: 2024-09-30 15:21 GMT

ಸಾಂದರ್ಭಿಕ ಚಿತ್ರ | PC : PTI

ಹೊಸದಿಲ್ಲಿ : ಭಾರತದ ನಗರಗಳು ಮತ್ತು ಪಟ್ಟಣಗಳಲ್ಲಿ ಒಳಚರಂಡಿಗಳು ಮತ್ತು ಸೆಪ್ಟಿಕ್ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸುವ ಅಪಾಯಕಾರಿ ಕೆಲಸದಲ್ಲಿ ತೊಡಗಿಕೊಂಡಿರುವ ಜನರಲ್ಲಿ 38,000 ಕಾರ್ಮಿಕರ ಪೈಕಿ ಶೇ.91.9ರಷ್ಟು ಜನರು ಎಸ್‌ಸಿ(ಶೇ.68.9),ಎಸ್‌ಟಿ (ಶೇ.8.3)ಮತ್ತು ಒಬಿಸಿ(ಶೇ.14.7) ಸಮುದಾಯಗಳಿಗೆ ಸೇರಿದವರಾಗಿದ್ದಾರೆ. ಶೇ.8.3ರಷ್ಟು ಕಾರ್ಮಿಕರು ಸಾಮಾನ್ಯ ವರ್ಗಕ್ಕೆ ಸೇರಿದ್ದಾರೆ.

ಸ್ವಚ್ಛತಾ ಕಾರ್ಮಿಕರನ್ನು ಎಣಿಕೆ ಮಾಡುವ ಇಂತಹ ಮೊದಲ ಪ್ರಯತ್ನದಲ್ಲಿ ಸರಕಾರವು 29 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿಯ 3,000ಕ್ಕೂ ಅಧಿಕ ನಗರ ಸ್ಥಳೀಯ ಸಂಸ್ಥೆಗಳಿಂದ ಸಂಗ್ರಹಿಸಿರುವ ಅಂಕಿ ಅಂಶಗಳ ಪ್ರಕಾರ ಈ ಮಾಹಿತಿ ಹೊರ ಬಂದಿದೆ. ಸರಕಾರವು ಸಂಸತ್ತಿನಲ್ಲಿ ಮಂಡಿಸಿದ ದತ್ತಾಂಶಗಳಂತೆ 2019 ಮತ್ತು 2023ರ ನಡುವೆ ಒಳಚರಂಡಿಗಳು ಮತ್ತು ಸೆಪ್ಟಿಕ್ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸುವ ಅಪಾಯಕಾರಿ ಕೆಲಸದಿಂದ ದೇಶಾದ್ಯಂತ ಕನಿಷ್ಠ 377 ಜನರು ಮೃತಪಟ್ಟಿದ್ದಾರೆ.

ಎಲ್ಲ ಒಳಚರಂಡಿ ಕೆಲಸಗಳನ್ನು ಯಾಂತ್ರೀಕರಿಸುವ ಮತ್ತು ಈ ಅಪಾಯಕಾರಿ ಕೆಲಸದಿಂದಾಗಿ ಸಾವುಗಳನ್ನು ತಡೆಯಲು ತನ್ನ ನಮಸ್ತೆ ಕಾರ್ಯಕ್ರಮದ ಅಂಗವಾಗಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್ ಕಾರ್ಮಿಕರ ಎಣಿಕೆ ಕಾರ್ಯವನ್ನು ನಡೆಸುತ್ತಿದೆ. 2023-24ರಲ್ಲಿ ಮ್ಯಾನ್ಯುವಲ್ ಸ್ಕ್ಯಾವೆಂಜರ್‌ಗಳ ಪುನರ್ವಸತಿಗಾಗಿ ಸ್ವಯಂ ಉದ್ಯೋಗ ಯೋಜನೆ(ಎಸ್‌ಆರ್‌ಎಂಎಸ್)ಯ ಬದಲು ಈ ಯೋಜನೆಯನ್ನು ತರಲಾಗಿದೆ.

ಮಲ ಹೊರುವುದು ಒಂದು ಪದ್ಧತಿಯಾಗಿ ದೇಶಾದ್ಯಂತ ಅಂತ್ಯಗೊಂಡಿದೆ ಮತ್ತು ಒಳಚರಂಡಿ ಹಾಗೂ ಸೆಪ್ಟಿಕ್ ಟ್ಯಾಂಕ್‌ಗಳ ಅಪಾಯಕಾರಿ ಶುಚಿತ್ವವನ್ನು ನಿಲ್ಲಿಸುವುದು ಈಗಿನ ಅಗತ್ಯವಾಗಿದೆ ಎನ್ನುವುದು ಕೇಂದ್ರ ಸರಕಾರದ ತಾರ್ಕಿಕತೆಯಾಗಿದೆ. ಮ್ಯಾನ್ಯುವಲ್ ಸ್ಕ್ಯಾವೆಂಜರ್‌ಗಳಾಗಿ ಉದ್ಯೋಗ ನಿಷೇಧ ಮತ್ತು ಅವರ ಪುನರ್ವಸತಿ ಕಾಯ್ದೆಯಲ್ಲಿ ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್ ಮತ್ತು ಅಪಾಯಕಾರಿ ಶುಚಿಗೊಳಿಸುವಿಕೆಯ ವ್ಯಾಖ್ಯಾನಗಳಲ್ಲಿಯ ತಾಂತ್ರಿಕ ವ್ಯತ್ಯಾಸವೊಂದು ಸರಕಾರದ ಈ ತಾರ್ಕಿಕತೆಗೆ ಆಧಾರವಾಗಿದೆ.

ಮಲಗುಂಡಿಗಳನ್ನು ಸ್ವಚ್ಛಗೊಳಿಸುವ ವಾಹನಗಳ ಚಾಲಕರು, ಸಹಾಯಕರು,ಯಂತ್ರ ನಿರ್ವಾಹಕರು ಮತ್ತು ಕ್ಲೀನರ್‌ಗಳು ಸೇರಿದಂತೆ ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್‌ಗಳ ಸ್ವಚ್ಛತೆಯೊಂದಿಗೆ ನೇರವಾಗಿ ಗುರುತಿಸಿಕೊಂಡಿರುವ ಕಾರ್ಮಿಕರನ್ನು ನಮಸ್ತೆ ಕಾರ್ಯಕ್ರಮವು ಗುರಿಯಾಗಿಸಿಕೊಂಡಿದೆ ಎಂದು ಸಚಿವಾಲಯವು ಹೇಳಿದೆ. ರಾಷ್ಟ್ರೀಯ ಮಟ್ಟದಲ್ಲಿ ಇಂತಹ ಕಾರ್ಮಿಕರ ಎಣಿಕೆ, ಅವರಿಗೆ ಸುರಕ್ಷತಾ ತರಬೇತಿ ಮತ್ತು ಸಲಕರಣೆಗಳ ಒದಗಿಸುವಿಕೆ ಹಾಗೂ ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್ ಕಾರ್ಮಿಕರನ್ನು ‘ಸ್ಯಾನಿಪ್ರಿನಿಯರ್ಸ್’ ಅಥವಾ ನೈರ್ಮಲ್ಯ ಉದ್ಯಮಿಗಳನ್ನಾಗಿ ಪರಿವರ್ತಿಸಲು ಬಂಡವಾಳ ಸಬ್ಸಿಡಿಗಳನ್ನು ನೀಡುವುದು ಅದರ ಗುರಿಯಾಗಿದೆ.

Full View

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News