ಕೇರಳ | ವನ್ಯಜೀವಿ ವಲಯದ ಮೇಲೆ ಸೀ ಪ್ಲೇನ್ ಹಾರಾಟದ ಪರಿಣಾಮದ ಕುರಿತು ತಜ್ಞರಲ್ಲಿ ಭಿನ್ನಾಭಿಪ್ರಾಯ
ಕೊಚ್ಚಿ: ಕೇರಳದಲ್ಲಿ ಸೀ ಪ್ಲೇನ್ ಪ್ರಾಯೋಗಿಕ ಸೇವೆಗೆ ಚಾಲನೆ ನೀಡಲಾಗಿದ್ದು, ವಿಮಾನವು ವನ್ಯಜೀವಿ ವಲಯದ ಮೇಲೆ ಹಾರಾಟ ನಡೆಸುವುದರಿಂದ ವನ್ಯಜೀವಿಗಳ ಮೇಲೆ ಆಗಲಿರುವ ಪರಿಣಾಮಗಳ ಕುರಿತು ತಜ್ಞರಲ್ಲಿ ಭಿನ್ನಾಭಿಪ್ರಾಯ ಮೂಡಿದೆ.
ಸೀಪ್ಲೇನ್ ಬೋಲ್ಗಟ್ಟಿ ಸರೋವರದ ಬಳಿಯಿರುವ ಕೊಚ್ಚಿ ಹಿನ್ನೀರಿನಿಂದ ಟೇಕಾಫ್ ಮಾಡಲಿದ್ದು, ಇಡುಕ್ಕಿ ಜಿಲ್ಲೆಯ ಮತ್ತು ಪೆಟ್ಟಿ ತೀರದ ಬಳಿ ಭೂಸ್ಪರ್ಶ ಮಾಡಲಿದೆ.
ಈ ವೈಮಾನಿಕ ಕಾರ್ಯಾಚರಣೆಯಿಂದ ಆನೆಗಳು, ಹುಲಿಗಳು ಹಾಗೂ ನೀಲಗಿರಿ ತಾರ್ ಗಳು ಸೇರಿದಂತೆ ವನ್ಯಜೀವಿಗಳಿಗೆ ತೊಂದರೆಯುಂಟು ಮಾಡಬಹುದು. ಇದರಿಂದ ವನ್ಯಜೀವಿಗಳು - ಮಾನವನ ನಡುವಿನ ಸಂಘರ್ಷ ಹೆಚ್ಚಾಗಬಹುದು ಎಂದು ಆತಂಕ ವ್ಯಕ್ತವಾಗಿದೆ.
ಈ ವಿಮಾನವು ಪೆಟ್ಟಿ ಜಲ ಸಂಗ್ರಹಾಗಾರವನ್ನು ಸಮೀಪಿಸುವಾಗ ಮನ್ನವನ್ ಶೋಲಾ, ಅನಮುಡಿ ಶೋಲೈ ಹಾಗೂ ಮತ್ತಿಕೇತ್ತನ್ ಶೋಲೈ ರಾಷ್ಟ್ರೀಯ ಉದ್ಯಾನವನಗಳು ಹಾಗೂ ಅವುಗಳ ಪರಿಸರ ಸೂಕ್ಷ್ಮ ವಲಯಗಳ ಮೇಲೆ ಹಾದು ಹೋಗಬೇಕಾಗಬಹುದು. ವನ್ಯಜೀವಿಗಳಿಗೆ ತೊಂದರೆಯುಂಟಾಗುವುದನ್ನು ತಪ್ಪಿಸಲು ವಿಮಾನದ ಪಥ ಹಾಗೂ ವಿಮಾನ ಕಾರ್ಯಾಚರಣೆ ನಡೆಸುವ ಎತ್ತರವು ನಿಯಮ ಮತ್ತು ನಿರ್ಬಂಧಗಳನ್ನು ಪಾಲಿಸಬೇಕಾಗುತ್ತದೆ. ವಿಮಾನ ಕಾರ್ಯಾಚರಣೆಯ ಸಂದರ್ಭದಲ್ಲಿ ವನ್ಯಜೀವಿಗಳು, ವಿಶೇಷವಾಗಿ ಆನೆಗಳ ಮೇಲಾಗುವ ಪರಿಣಾಮಗಳನ್ನು ಅಧ್ಯಯನ ಮಾಡಬೇಕಿದೆ ಎಂದು ಮಾಜಿ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ನಿರ್ವಹಣೆ) ನೋಯಲ್ ಥಾಮಸ್ ಸಲಹೆ ನೀಡುತ್ತಾರೆ.
ಪ್ರಸ್ತಾವಿತ ವಿಮಾನದ ಟೇಕಾಫ್ ಮತ್ತು ಭೂಸ್ಪರ್ಶದ ಸಂದರ್ಭದಲ್ಲಿ ಹತ್ತಿರದಲ್ಲೇ ನೆಲೆಸಿರುವ ಆನೆಗಳಿಗೆ ಸೀ ಪ್ಲೇನ್ ಕಾರ್ಯಾಚರಣೆಯು ತೊಂದರೆಯನ್ನುಂಟು ಮಾಡಬಹುದು. ಪ್ರಸ್ತಾವಿತ ಪ್ರದೇಶವು ಆನೆಗಳ ನಿರಂತರ ಚಲನವಲನ ಹಾಗೂ ಮಾನವ-ಆನೆ ಸಂಘರ್ಷಗಳಿಗೆ ಕುಖ್ಯಾತವಾಗಿದೆ. ಈ ಸಂಬಂಧ ಸರಕಾರವು ಪರಿಸರದ ಮೇಲಾಗುವ ಪರಿಣಾಮಗಳ ಕುರಿತು ಮೌಲ್ಯಮಾಪನ ನಡೆಸಬೇಕು. ಪ್ರವಾಸೋದ್ಯಮ ಯೋಜನೆಗೆ ರಾಜ್ಯ ಮತ್ತು ಕೇಂದ್ರ ಸರಕಾರಗಳಿಂದ ಅನುಮತಿ ಪಡೆಯಬೇಕು ಎಂದು ಕೇಂದ್ರ ಸರಕಾರದ ಆನೆ ಯೋಜನೆಯ ಮಾಜಿ ನಿರ್ದೇಶಕರೂ ಆಗಿದ್ದ ಥಾಮಸ್ ಅಭಿಪ್ರಾಯ ಪಡುತ್ತಾರೆ.
ಆದರೆ, ಸೀ ಪ್ಲೇನ್ ಕಾರ್ಯಾಚರಣೆಯಿಂದ ವನ್ಯಜೀವಿಗಳ ಮೇಲೆ ಯಾವುದೇ ದುಷ್ಪರಿಣಾಮವುಂಟಾಗಬಹುದಾದ ಸಾಧ್ಯತೆ ಕಡಿಮೆ ಎಂದು ರಾಜ್ಯ ಅರಣ್ಯ ಇಲಾಖೆಯ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ.
ವನ್ಯಜೀವಿ ವಿಭಾಗದ ಪರಿಗಣನೆಗೆ ಯೋಜನೆ ಕುರಿತ ಯಾವುದೇ ಕಡತವೂ ಬಂದಿಲ್ಲ ಎಂದು ಕೇರಳ ರಾಜ್ಯ ಮುಖ್ಯ ವನ್ಯಜೀವಿ ವಾರ್ಡನ್ ಪ್ರಮೋದ್ ಜಿ.ಕೃಷ್ಣನ್ ಹೇಳಿದ್ದಾರೆ.
ವನ್ಯಜೀವಿ ನೆಲೆಯ ಮೇಲೆ ಈ ಯೋಜನೆಯಿಂದ ಯಾವುದೇ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಕಡಿಮೆ ಎಂದು ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ನಿರ್ವಹಣೆ) ರಾಜೇಶ್ ರವೀಂದ್ರನ್ ಹೇಳುತ್ತಾರೆ. ಪೆಟ್ಟಿಯಲ್ಲಿನ ಆನೆಗಳ ಮೇಲೆ ಈ ಯೋಜನೆಯಿಂದ ದುಷ್ಪರಿಣಾಮವುಂಟಾಗುವ ಸಾಧ್ಯತೆ ಕಡಿಮೆ ಎಂದು ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ನಿರ್ವಹಣೆ) ರಾಜೇಶ್ ರವೀಂದ್ರನ್ ಅಭಿಪ್ರಾಯ ಪಡುತ್ತಾರೆ.
“ಇದಕ್ಕೂ ಮುನ್ನ, ಅತಿರಾಪಳ್ಳಿಯ ಮೇಲೆ ಹೆಲಿಕಾಪ್ಟರ್ ಒಂದರ ಹಾರಾಟಕ್ಕೆ ಇಲಾಖೆಯು ಅನುಮತಿ ನಿರಾಕರಿಸಿತ್ತು. ಹೆಲಿಕಾಪ್ಟರ್ ಗೆ ಹೋಲಿಸಿದರೆ ಈ ಪ್ರದೇಶದ ಮೇಲೆ ಹಾದು ಹೋಗಲಿರುವ ಸೀ ಪ್ಲೇನ್ದಿಂದ ಕಡಿಮೆ ತೊಂದರೆಯಾಗುವ ಸಾಧ್ಯತೆ ಇದೆ. ಸೀ ಪ್ಲೇನ್ ಕಾರ್ಯಾಚರಣೆಗೆ ಅರಣ್ಯ ಇಲಾಖೆಯ ಅನುಮತಿ ಪಡೆಯುವುದು ಅಗತ್ಯವೆಂದು ಯಾವುದೇ ಹಾಲಿ ಕಾನೂನುಗಳು ಒತ್ತಿ ಹೇಳುವುದಿಲ್ಲ” ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಸೌಜನ್ಯ: thehindu.com