ಕೇರಳ: ಆಂಬ್ಯುಲೆನ್ಸ್‌ ಗೆ ಅಡ್ಡಿಪಡಿಸಿದ ಕಾರು ಚಾಲಕನ ಲೈಸನ್ಸ್ ರದ್ದು, 2.5 ಲಕ್ಷ ರೂ. ದಂಡ

Update: 2024-11-18 06:41 GMT

Photo credit: indiatoday.in

ಕೇರಳ: ತ್ರಿಶೂರ್‌ ನಲ್ಲಿ ಆಂಬ್ಯುಲೆನ್ಸ್ ಗೆ ಅಡ್ಡಿಪಡಿಸಿದ ವ್ಯಕ್ತಿಯೋರ್ವನ ಡ್ರೈವಿಂಗ್ ಲೈಸೆನ್ಸ್ ರದ್ದುಗೊಳಿಸಿ ಆತನಿಗೆ 2.5 ಲಕ್ಷ ರೂ. ದಂಡವನ್ನು ಕೇರಳ ಪೊಲೀಸರು ವಿಧಿಸಿದ್ದಾರೆ.

ನವೆಂಬರ್ 7ರಂದು ಚಾಲಕುಡಿಯಲ್ಲಿ ಘಟನೆ ಸಂಭವಿಸಿದ್ದು, ಪೊನ್ನಾನಿಯಿಂದ ತ್ರಿಶೂರ್ ವೈದ್ಯಕೀಯ ಕಾಲೇಜಿಗೆ ಪ್ರಯಾಣಿಸುತ್ತಿದ್ದ ಆಂಬ್ಯುಲೆನ್ಸ್ ಗೆ ದಾರಿ ಬಿಟ್ಟುಕೊಡದೆ ಕಾರೊಂದು ಅಡ್ಡಿಸಿತ್ತು. ಈ ಕುರಿತ ವಿಡಿಯೋ ವ್ಯಾಪಕವಾಗಿ ವೈರಲ್ ಆಗಿತ್ತು. ವೈರಲ್ ವಿಡಿಯೋದಲ್ಲಿ ಆಂಬ್ಯುಲೆನ್ಸ್ ಚಾಲಕ ಸೈರನ್ ಹಾಕಿದ್ದರೂ, ನಿರಂತರವಾಗಿ ಹಾರ್ನ್ ಮಾಡುತ್ತಿದ್ದರೂ ಮಾರುತಿ ಸುಜುಕಿ ಸಿಯಾಜ್ ಕಾರು(Maruti Suzuki Ciaz car) ಹಾದಿ ಬಿಟ್ಟುಕೊಡದೆ ಅಡ್ಡಿಪಡಿಸುವುದು ಕಂಡು ಬಂದಿತ್ತು. ಕಾರನ್ನು ಹಿಂದಿಕ್ಕದಂತೆ ಅಂಬ್ಯುಲೆನ್ಸ್ ಗೆ ಪದೇ ಪದೇ ತಡೆಯವುದು ವಿಡಿಯೋದಲ್ಲಿ ಸೆರೆಯಾಗಿತ್ತು. ವಿಡಿಯೋ ವೈರಲ್ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಟೀಕೆಗೂ ಕಾರಣವಾಗಿತ್ತು.

ಕೇರಳದ ಸಂಚಾರಿ ಪೊಲೀಸರು ವಾಹನದ ನೋಂದಣಿ ನಂಬರ್ ಆಧಾರದಲ್ಲಿ ಕಾರನ್ನು ಪತ್ತೆ ಹಚ್ಚಿ ಚಾಲಕನ ವಿರುದ್ಧ ತುರ್ತು ವಾಹನಕ್ಕೆ ಅಡ್ಡಿ ಸೇರಿದಂತೆ ಮೋಟಾರು ವಾಹನ ಕಾಯ್ದೆಯ ಹಲವು ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ. ಕಾರು ಚಾಲಕನಿಗೆ 2.5 ಲಕ್ಷ ದಂಡವನ್ನು ವಿಧಿಸಲಾಗಿದೆ. ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 194 ಇ ಪ್ರಕಾರ ಆಂಬ್ಯುಲೆನ್ಸ್ ಗೆ ದಾರಿ ನೀಡಲು ನಿರಾಕರಿಸಿದರೆ ಆರು ತಿಂಗಳವರೆಗೆ ಜೈಲು ಶಿಕ್ಷೆ ಮತ್ತು 10,000ರೂ. ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ.

ಆಂಬ್ಯುಲೆನ್ಸ್‌ ಗೆ ದಾರಿ ಬಿಟ್ಟುಕೊಡುವುದು ಕಾನೂನು ಮತ್ತು ನೈತಿಕ ಜವಾಬ್ದಾರಿ ಎಂದು ಕೇರಳ ಮೋಟಾರು ವಾಹನ ಇಲಾಖೆ(MVD) ಪುನರುಚ್ಚರಿಸಿದೆ. ಅಂಬ್ಯುಲೆನ್ಸ್ ಗೆ ಅಡ್ಡಿಪಡಿಸುವುದರಿಂದ ನಿರ್ಣಾಯಕ ವೈದ್ಯಕೀಯ ಸೇವೆಗಳಿಗೆ ಅಡ್ಡಿಯಾಗುತ್ತದೆ ಮತ್ತು ಜೀವಕ್ಕೆ ಅಪಾಯವನ್ನುಂಟುಮಾಡುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News