ರಾಹುಲ್ ಗಾಂಧಿ ಅಸ್ಸಾಂ ಯಾತ್ರೆ ವೇಳೆ ಭದ್ರತಾ ವೈಫಲ್ಯ; ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದ ಮಲ್ಲಿಕಾರ್ಜುನ ಖರ್ಗೆ
ಹೊಸದಿಲ್ಲಿ: ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಸ್ಸಾಂ ಪೊಲೀಸರ ನಡುವೆ ಗುವಾಹಟಿ ನಗರ ಮಿತಿಯಲ್ಲಿ ಘರ್ಷಣೆ ನಡೆದ ಮರುದಿನ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಭಾರತ್ ಜೋಡೊ ನ್ಯಾಯ ಯಾತ್ರೆಯಲ್ಲಿ ಭಾಗವಹಿಸಿರುವ ರಾಹುಲ್ ಗಾಂಧಿ ಹಾಗೂ ಇನ್ನಿತರರ ಭದ್ರತೆಯನ್ನು ಖಾತರಿ ಪಡಿಸಲು ಮಧ್ಯ ಪ್ರವೇಶ ಮಾಡಬೇಕು ಎಂದು ಮನವಿ ಮಾಡಿದ್ದಾರೆ ಎಂದು ndtv.com ವರದಿ ಮಾಡಿದೆ.
ರಾಹುಲ್ ಗಾಂಧಿ ವಿರುದ್ಧ ಅಸ್ಸಾಂ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡ ಬೆನ್ನಿಗೇ ಮಲ್ಲಿಕಾರ್ಜುನ ಖರ್ಗೆ ಈ ಪತ್ರ ಬರೆದಿದ್ದಾರೆ. ಅವರ ವಿರುದ್ಧ ಕ್ರಿಮಿನಲ್ ಪಿತೂರಿ, ಕಾನೂನುಬಾಹಿರ ಗುಂಪುಗೂಡುವಿಕೆ, ಶಾಂತಿಭಂಗ ಸೇರಿದಂತೆ ಹಲವಾರು ಸೆಕ್ಷನ್ ಗಳಡಿ ಮೊಕದ್ದಮೆ ದಾಖಲಿಸಿಕೊಳ್ಳಲಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ನಕ್ಸಲೀಯರ ತಂತ್ರ ಬಳಸುತ್ತಿದ್ದು, ಇದು ಅಸ್ಸಾಂ ಸಂಸ್ಕೃತಿಯ ಭಾಗವಲ್ಲ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಹೇಳಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಬರೆದಿರುವ ಪತ್ರದಲ್ಲಿ, “ರಾಹುಲ್ ಗಾಂಧಿ ಝೆಡ್ ಪ್ಲಸ್ ಶ್ರೇಣಿಯ ಭದ್ರತೆ ಹೊಂದಿರುವ ವ್ಯಕ್ತಿಯಾಗಿದ್ದು, ಹಲವಾರು ಸಂದರ್ಭಗಳಲ್ಲಿ ಅಸ್ಸಾಂ ಪೊಲೀಸರು ಅವರಿಗೆ ಸೂಕ್ತ ಭದ್ರತೆಯನ್ನು ಒದಗಿಸಬೇಕಾಗುತ್ತದೆ” ಎಂದು ಖರ್ಗೆ ಹೇಳಿದ್ದು, ಕಾಂಗ್ರೆಸ್ ಬ್ಯಾನರ್ ಗಳಿಗೆ ಹಾನಿ ಹಾಗೂ ಜನವರಿ 21ರಂದು ಕಾಂಗ್ರೆಸ್ ಯಾತ್ರೆಗೆ ತಡೆಯೊಡ್ಡಿರುವ ಬಿಜೆಪಿ ಕಾರ್ಯಕರ್ತರು, ಅಸ್ಸಾಂ ಕಾಂಗ್ರೆಸ್ ಮುಖ್ಯಸ್ಥ ಭೂಪೇನ್ ಬೋರಾ ಮೇಲೆ ಹಲ್ಲೆ ನಡೆಸಿರುವುದನ್ನೂ ಅವರ ಗಮನಕ್ಕೆ ತಂದಿದ್ದಾರೆ.
“ಮೇಲೆ ತಿಳಿಸಲಾಗಿರುವ ಎಲ್ಲ ಸಂದರ್ಭಗಳಲ್ಲೂ ಅಸ್ಸಾಂ ಪೊಲೀಸರು ವ್ಯವಸ್ಥಿತವಾಗಿ ಬಿಜೆಪಿ ಕಾರ್ಯಕರ್ತರ ಪರ ನಿಂತಿದ್ದಾರೆ ಅಥವಾ ಅವರು ರಾಹುಲ್ ಗಾಂಧಿ ಅವರ ಭದ್ರತಾ ಸಿಬ್ಬಂದಿಗಳನ್ನು ಉಲ್ಲಂಘಿಸಿ ತೀರಾ ಅವರ ಸನಿಹಕ್ಕೆ ಧಾವಿಸಲು ಅವಕಾಶ ನೀಡಿದ್ದಾರೆ. ಆ ಮೂಲಕ ಅವರ ದೈಹಿಕ ಭದ್ರತೆ ಹಾಗೂ ಅವರ ತಂಡದ ಭದ್ರತೆಗೆ ಅಪಾಯ ತಂದೊಡ್ಡಿದ್ದಾರೆ” ಎಂದು ಖರ್ಗೆ ತಮ್ಮ ಪತ್ರದಲ್ಲಿ ಆರೋಪಿಸಿದ್ದಾರೆ.
ಈ ನಡುವೆ, ಹಿಮಂತ ಬಿಸ್ವ ಶರ್ಮ ನೇತೃತ್ವದ ಬಿಜೆಪಿ ಸರ್ಕಾರವು ಕಾಂಗ್ರೆಸ್ ಯಾತ್ರೆಗೆ ಅಡ್ಡಿಯನ್ನುಂಟು ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕರು ದೂರಿದ್ದಾರೆ.