ಕುಂಭ ಮೇಳ: 40 ಕೋಟಿ ಮಂದಿಯ ಸ್ವಾಗತಕ್ಕೆ ಪ್ರಯಾಗ್‌ರಾಜ್ ಸಜ್ಜು
ಹೊಸದಿಲ್ಲಿ: ಮುಂದಿನ ವರ್ಷ ನಡೆಯುವ ಮಹಾಕುಂಭ ಮೇಳ-2025ಕ್ಕೆ ವಿಶ್ವದ ವಿವಿಧೆಡೆಗಳಿಂದ ಆಗಮಿಸುವ 40 ಕೋಟಿ ಭಕ್ತರ ಸ್ವಾಗತಕ್ಕೆ ಪ್ರಯಾಗ್‌ರಾಜ್ ಸಜ್ಜಾಗುತ್ತಿದೆ. ವಿಶ್ವದ ಅತಿದೊಡ್ಡ ಧಾರ್ಮಿಕ ಸಮಾವೇಶ ಹಾಗೂ ಭಾರತೀಯ ಸಂಸ್ಕೃತಿಯ ವೈವಿಧ್ಯತೆಯ ಪ್ರತೀಕ ಎನ್ನಲಾದ ಈ ಮೇಳದ ಯಶಸ್ಸಿಗೆ ಉತ್ತರ ಪ್ರದೇಶ ಸರ್ಕಾರ ಮತ್ತು ಕೇಂದ್ರದ ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವಾಲಯ ಟೊಂಕ ಕಟ್ಟಿವೆ. 45 ದಿನಗಳ ಈ ಮೇಳಕ್ಕಾಗಿ ಕಲಾಕೃತಿಗಳು, ಭಿತ್ತಿಚಿತ್ರಗಳನ್ನು ಅಳವಡಿಸುವ ಮತ್ತು ನಗರದ ಗೋಡೆಗಳನ್ನು ಶೃಂಗರಿಸುವ ಕಾರ್ಯ ಭರದಿಂದ ಸಾಗಿದೆ.
ಮಹಾಕುಂಭ ಮೇಳ ಪ್ರತಿ 12 ವರ್ಷಗಳಿಗೊಮ್ಮೆ ಪ್ರಯಾಗ್‌ರಾಜ್ ನಲ್ಲಿ ನಡೆಯುವ ಉತ್ಸವವಾಗಿದ್ದು, ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ತ್ರಿವೇಣಿ ಸಂಗಮದಲ್ಲಿ ಸ್ನಾನಕ್ಕಾಗಿ ಲಕ್ಷಾಂತರ ಮಂದಿ ಭಕ್ತರು ಆಗಮಿಸುತ್ತಾರೆ. ಇದು ಆತ್ಮ ಶುದ್ಧೀಕರಣದ ಸಂಕೇತ ಎಂದು ನಂಬಲಾಗಿದ್ದು, ಇದು ಮೋಕ್ಷ ಸಾಧನೆಯ ಮಾರ್ಗ ಎಂಬ ನಂಬಿಕೆ ಹಿಂದೂ ಭಕ್ತರದಲ್ಲಿದೆ.
2025ರ ಜನವರಿ 13 ರಿಂದ ಫೆಬ್ರುವರಿ 26ರವರೆಗೆ ಈ ಮೇಳ ನಡೆಯಲಿದ್ದು, ಇದರ ಹಿನ್ನೆಲೆಯಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ವಸ್ತುಪ್ರದರ್ಶನಗಳು ಆಯೋಜನೆಗೊಂಡಿವೆ. ಉದಾಹರಣೆಗೆ ಭಾರತದ ಪ್ರಾಚ್ಯವಸ್ತು ನಿರ್ದೇಶನಾಲಯ, ಇಂದಿರಾಗಾಂಧಿ ಸೆಂಟರ್ ಫಾರ್ ಆರ್ಟ್ಸ್, ಮ್ಯೂಸಿಯಂ ಅಂಡ್ ಆರ್ಚೀವ್ಸ್ ಜತೆಯಾಗಿ ಸೇರಿ ಹಸ್ತಪ್ರತಿಗಳು ಮತ್ತು ಛಾಯಾಚಿತ್ರಗಳನ್ನು ಒಳಗೊಂಡಂತೆ ದೇಶದ ವಿವಿಧ ಪರಂಪರೆಗಳನ್ನು ಬಿಂಬಿಸುವ ಡಿಜಿಟಲ್ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಂಡಿವೆ.
ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ವತಿಯಿಂದ ಸಮುದ್ರ ಮಥನ ಮತ್ತಿತರ ಕುಂಭಮೇಳಕ್ಕೆ ಸಂಬಂಧಿಸಿದ ನಾಟಕಗಳನ್ನು ಪ್ರದರ್ಶಿಸಲು ಉದ್ದೇಶಿಸಲಾಗಿದೆ. ರಾಜ್ಯ ಸರ್ಕಾರವು 10 ಸಾವಿರ ಮಂದಿಗೆ ಆಸನ ವ್ಯವಸ್ಥೆ ಕಲ್ಪುಸುವ ಗಂಗಾ ಪೆಂಡಾಲ್ ನಿರ್ಮಿಸುತ್ತಿದ್ದು, 4000 ಮಂದಿಗೆ ಆಸನ ವ್ಯವಸ್ಥೆ ಇರುವ ಇತರ ಮೂರು ವೇದಿಕೆಗಳನ್ನೂ ನಿರ್ಮಿಸಲಾಗುತ್ತಿದೆ. ವಿವಿಧ ರಾಜ್ಯಗಳ ಸೆಲೆಬ್ರಿಟಿಗಳು, ಶಾಸ್ತ್ರೀಯ ಮತ್ತು ಜಾನಪದ ಕಲಾವಿದರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಇಂಥ ಒಟ್ಟು 20 ವೇದಿಕೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.
ಇತರ ಸಂಘಟಕರ ಜತೆ ಸೇರಿ ಸಾಹಿತ್ಯ ಕಲಾ ಅಕಾಡೆಮಿ ಪುಸ್ತಕ ಪ್ರದರ್ಶನ, ವಿಚಾರ ಸಂಕಿರಣಗಳು ಮತ್ತು ಚರ್ಚಾಗೋಷ್ಠಿ ಆಯೋಜಿಸಿದೆ. ಕೇಂದ್ರಾಡಳಿತ ಮತ್ತು ರಾಜ್ಯ ಸರ್ಕಾರಗಳು ಸಾಂಸ್ಕೃತಿಕ ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸಲಿವೆ.