ದತ್ತಾಂಶ ಸಂರಕ್ಷಣಾ ಕಾನೂನಿನಲ್ಲಿ ಪತ್ರಕರ್ತರಿಗೆ ವಿನಾಯಿತಿ ಕೊರತೆಯಿಂದ ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ: ಎಡಿಟರ್ಸ್ ಗಿಲ್ಡ್

Update: 2024-02-18 16:25 GMT

Photo : newsclick.in

ಹೊಸದಿಲ್ಲಿ : ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಕಾಯ್ದೆಯಲ್ಲಿ ಪತ್ರಕರ್ತರಿಗೆ ವಿನಾಯಿತಿ ಇಲ್ಲದಿರುವುದು ದೇಶದಲ್ಲಿ ಪತ್ರಿಕೋದ್ಯಮವನ್ನು ಸ್ಥಗಿತಗೊಳಿಸಲಿದೆ ಎಂದು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಬರೆದಿರುವ ಪತ್ರದಲ್ಲಿ ತಿಳಿಸಿದೆ.

ಕಳೆದ ವರ್ಷದ ಆಗಸ್ಟ್ ನಲ್ಲಿ ಸಂಸತ್ತಿನಲ್ಲಿ ಅಂಗೀಕಾರಗೊಂಡ ಕಾಯ್ದೆಯು ನಾಗರಿಕರ ದತ್ತಾಂಶ ಸಂಗ್ರಹ ಮತ್ತು ಸಂಸ್ಕರಣೆಗೆ ಸಂಬಂಧಿಸಿದ ಖಾಸಗಿ ಮತ್ತು ಸರಕಾರಿ ಸಂಸ್ಥೆಗಳ ಮೇಲೆ ಬಾಧ್ಯತೆಗಳನ್ನು ಹೊರಿಸಿದೆ. ವ್ಯಕ್ತಿಗಳ ಡಿಜಿಟಲ್ ದತ್ತಾಂಶಗಳನ್ನು ದುರ್ಬಳಕೆ ಮಾಡಿಕೊಳ್ಳುವ ಅಥವಾ ಅವುಗಳನ್ನು ರಕ್ಷಿಸುವಲ್ಲಿ ವಿಫಲಗೊಳ್ಳುವ ಸಂಸ್ಥೆಗಳಿಗೆ 250 ಕೋಟಿ ರೂ.ವರೆಗೆ ದಂಡವನ್ನು ಕಾಯ್ದೆಯಲ್ಲಿ ಪ್ರಸ್ತಾವಿಸಲಾಗಿದೆ.

ಕಾಯ್ದೆಯಲ್ಲಿ ಪತ್ರಕರ್ತರಿಗೆ ವಿನಾಯಿತಿ ನೀಡದಿರುವುದರಿಂದ ಅದು ಪತ್ರಿಕೋದ್ಯಮ ಚಟುವಟಿಕೆಗಳ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತದೆ ಎಂದು ಕಳವಳವನ್ನು ವ್ಯಕ್ತಪಡಿಸಿರುವ ಗಿಲ್ಡ್, ವಿಶೇಷವಾಗಿ ಪತ್ರಕರ್ತರು ತಮ್ಮ ಪತ್ರಿಕೋದ್ಯಮ ಚಟುವಟಿಕೆಗಳಲ್ಲಿ ಯಾವುದೇ ವೈಯಕ್ತಿಕ ಡಾಟಾವನ್ನು ಸಂಸ್ಕರಿಸಲು ಕಾಯ್ದೆಯ ಕಲಂ 7ರಡಿ ಒಪ್ಪಿಗೆಯನ್ನು ಪಡೆದುಕೊಳ್ಳಬೇಕಾದ ಅಗತ್ಯವು ಕಳವಳವನ್ನುಂಟು ಮಾಡಿದೆ ಎಂದು ಹೇಳಿದೆ.

ಪತ್ರಿಕೋದ್ಯಮ ಚಟುವಟಿಕೆಗಳಿಗೆ ಯಾವುದೇ ವಿನಾಯಿತಿಯ ಅನುಪಸ್ಥಿತಿಯು ಪತ್ರಕರ್ತರನ್ನು ತಮ್ಮ ಕೆಲಸದ ಸಂದರ್ಭಗಳಲ್ಲಿ ಯಾವುದೇ ವೈಯಕ್ತಿಕ ದತ್ತಾಂಶದ ಸಂಸ್ಕರಣೆಗಾಗಿ ಒಪ್ಪಿಗೆಯ ಮೇಲೆಯೇ ಅವಲಂಬಿತರಾಗಿಸುತ್ತದೆ. ಒಪ್ಪಿಗೆಯ ನಿರಾಕರಣೆಯು ಪತ್ರಿಕಾ ಮಾಧ್ಯಮದ ಮೂಲಭೂತ ಪಾತ್ರ ಹಾಗು ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಖಚಿತಪಡಿಸುವ ಅದರ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತದೆ ಎಂದು ಹೇಳಿರುವ ಗಿಲ್ಡ್, ಕಾನೂನಿನಲ್ಲಿ ಪತ್ರಕರ್ತರಿಗೆ ವಿನಾಯಿತಿಯನ್ನು ಒದಗಿಸುವಂತೆ ಕೇಂದ್ರವನ್ನು ಆಗ್ರಹಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News