ಲಕ್ಷದ್ವೀಪ : ಪ್ರಧಾನಿಯಿಂದ 1,156 ಕೋಟಿ ರೂ.ಗಳ ಯೋಜನೆಗಳ ಉದ್ಘಾಟನೆ, ಶಿಲಾನ್ಯಾಸ

Update: 2024-01-03 15:45 GMT

Photo: PTI 

ಕವರಟ್ಟಿ: ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪದಲ್ಲಿ 1,156 ಕೋಟಿ ರೂ.ವೆಚ್ಚದ ವಿವಿಧ ಯೋಜನೆಗಳನ್ನು ಉದ್ಘಾಟಿಸಿದರು ಮತ್ತು ಶಿಲಾನ್ಯಾಸ ನೆರವೇರಿಸಿದರು.

ಇಲ್ಲಿ ನೂರಾರು ದ್ವೀಪವಾಸಿಗಳು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಚಾಲನೆ ನೀಡಲಾದ ಯೋಜನೆಗಳಲ್ಲಿ ಕೊಚ್ಚಿ-ಲಕ್ಷದ್ವೀಪ ಜಲಾಂತರ್ಗಾಮಿ ಆಫ್ಟಿಕಲ್ ಫೈಬರ್ ಸಂಪರ್ಕ ಯೋಜನೆಯು ಸೇರಿದೆ. ಮೋದಿ 2020, ಆಗಸ್ಟ್ ನಲ್ಲಿ ಕೆಂಪುಕೋಟೆಯಲ್ಲಿ ತನ್ನ ಸ್ವಾತಂತ್ರ್ಯದಿನ ಭಾಷಣದಲ್ಲಿ ಈ ಯೋಜನೆಯನ್ನು ಪ್ರಕಟಿಸಿದ್ದರು.

ಅಧಿಕಾರಿಗಳ ಪ್ರಕಾರ ಈ ಪರಿವರ್ತನೀಯ ಉಪಕ್ರಮವು ಲಕ್ಷದ್ವೀಪದಲ್ಲಿ ನಿಧಾನಗತಿ ಇಂಟರ್ನೆಟ್ ಸಮಸ್ಯೆಯನ್ನು ಬಗೆಹರಿಸುವ ಉದ್ದೇಶವನ್ನು ಹೊಂದಿದೆ. ಇದು ಈ ದ್ವೀಪ ಸಮೂಹದಲ್ಲಿ ಇಂಟರ್ನೆಟ್ ವೇಗವನ್ನು 1.7 ಜಿಬಿಪಿಎಸ್ನಿಂದ 200 ಜಿಬಿಪಿಎಸ್ ಗೆ ಹೆಚ್ಚಿಸಲಿದೆ.

ಲಕ್ಷದ್ವೀಪವನ್ನು ಈಗ ಜಲಾಂತರ್ಗಾಮಿ ಆಪ್ಟಿಕಲ್ ಫೈಬರ್ ಕೇಬಲ್ ಮೂಲಕ ಸಂಪರ್ಕಿಸಲಾಗಿದ್ದು, ಇದು ಸಂವಹನ ಮೂಲಸೌಕರ್ಯದಲ್ಲಿ ಗಮನಾರ್ಹ ಬದಲಾವಣೆಯನ್ನು ತರಲಿದೆ. ಇಂಟರ್ನೆಟ್ ಸೇವೆಗಳು, ಟೆಲಿಮೆಡಿಸಿನ್, ಇ-ಆಡಳಿತ, ಶಿಕ್ಷಣ, ಡಿಜಿಟಲ್ ಬ್ಯಾಂಕಿಂಗ್, ಕರೆನ್ಸಿ ಬಳಕೆ ಮತ್ತು ಸಾಕ್ಷರತೆಯನ್ನು ಇದು ಹೆಚ್ಚಿಸಲಿದೆ ಎಂದೂ ಅಧಿಕಾರಿಗಳು ತಿಳಿಸಿದರು.

ಕಡ್ಮತ್ ನಲ್ಲಿ ಪ್ರತಿದಿನ 1.5 ಲಕ್ಷ ಲೀ.ಶುದ್ಧ ಕುಡಿಯುವ ನೀರಿನ ಉತ್ಪಾದನಾ ಘಟಕವನ್ನೂ ಉದ್ಘಾಟಿಸಿದ ಪ್ರಧಾನಿಯವರು ಅಗಟ್ಟಿ ಮತ್ತು ಮಿನಿಕಾಯ್ ದ್ವೀಪಗಳಲ್ಲಿ ಎಲ್ಲ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕವನ್ನು ಕಲ್ಪಿಸುವ ಯೋಜನೆಯನ್ನು ದೇಶಕ್ಕೆ ಅರ್ಪಿಸಿದರು.

ಮೋದಿಯವರು ಚಾಲನೆ ನೀಡಿದ ಇತರ ಯೋಜನೆಗಳಲ್ಲಿ ಕವರಟ್ಟಿಯಲ್ಲಿ ಸೌರ ವಿದ್ಯುತ್ ಘಟಕವು ಸೇರಿದ್ದು, ಇದು ಲಕ್ಷದ್ವೀಪದಲ್ಲಿ ಮೊದಲ ಬ್ಯಾಟರಿ ಬೆಂಬಲಿತ ಸೌರ ವಿದ್ಯುತ್ ಯೋಜನೆಯಾಗಿದೆ.

ಕಲ್ಪೆನಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಇತರೆಡೆಗಳಲ್ಲಿ ಐದು ಮಾದರಿ ಅಂಗನವಾಡಿಗಳ ನಿರ್ಮಾಣಕ್ಕೆ ಶಿಲಾನ್ಯಾಸವನ್ನೂ ಮೋದಿ ನೆರವೇರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News