ಚಿರತೆ ದಾಳಿಯಿಂದ 8 ಮಂದಿಗೆ ಗಂಭೀರ ಗಾಯ; ಆಸ್ಪತ್ರೆಗೆ ದಾಖಲು

Update: 2024-04-02 03:17 GMT

ಚಿರತೆಯನ್ನು ಬೋನಿನಲ್ಲಿ ಸೆರೆ ಹಿಡಿದು ಸಾಗಿಸುತ್ತಿರುವುದು Photo:PTI

ಹೊಸದಿಲ್ಲಿ: ದೆಹಲಿಯ ಜಗತ್ಪುರ ಗ್ರಾಮದಲ್ಲಿ ಮನೆಗಳಿಗೆ ನುಗ್ಗಿ ಎಂಟು ಮಂದಿಯನ್ನು ಗಾಯಗೊಳಿಸಿದ ಚಿರತೆಯನ್ನು ಬೋನಿನಲ್ಲಿ ಹಿಡಿದು ಅರಿವಳಿಕೆ ಚುಚ್ಚುಮದ್ದು ನೀಡುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ದಾಳಿಕೋರ ಚಿರತೆ ಯಮುನಾ ಜೀವವೈವಿಧ್ಯ ಪಾರ್ಕ್ ನಿಂದ ತಪ್ಪಿಸಿಕೊಂಡು ಬಂದಿರಬೇಕು ಎಂದು ಶಂಕಿಸಲಾಗಿದ್ದು, ಐದು ಗಂಟೆ ಕಾಲ ಭೀತಿ ಮೂಡಿಸಿದ್ದ ಚಿರತೆಯನ್ನು ಕೊನೆಗೂ ಸೆರೆ ಹಿಡಿಯಲಾಗಿದೆ.

ಚಿರತೆಯ ಉಗುರಿನಿಂದ ಆಳವಾದ ಗಾಯಗಳಾಗಿರುವ ಎಂಟು ಮಂದಿಯನ್ನು ವಿವಿಧ ಆಸ್ಪತ್ರೆಗಳಿಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಈ ಘಟನೆಯ ಹಲವು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.  ಚಿರತೆಯನ್ನು ಇದೀಗ ಅರಣ್ಯ ಇಲಾಖೆಯ ರಕ್ಷಣಾ ಸೌಲಭ್ಯದಲ್ಲಿ ಇರಿಸಲಾಗಿದ್ದು, ನಿಗದಿತ ಶಿಷ್ಟಾಚಾರದ ಅನ್ವಯ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಉತ್ತರ ದೆಹಲಿಯ ಜಗತ್ಪುರದಲ್ಲಿ ಸೋಮವಾರ ಬೆಳಿಗ್ಗೆ ಕಾಣಿಸಿಕೊಂಡ ಗಂಡು ಚಿರತೆ, ಕೆಲ ಮನೆಗಳು ಹಾಗೂ ಜನರ ಮೇಲೆ ದಾಳಿ ನಡೆಸಿ ಜನರಲ್ಲಿ ಭೀತಿ ಮೂಡಿಸಿತ್ತು. ಎಂಟು ಮಂದಿ ಗಾಯಗೊಂಡಿದ್ದು, ಅಂತಿಮವಾಗಿ ಒಂದು ಕೊಠಡಿಯಲ್ಲಿ ಕೂಡಿಹಾಕಿ ಅರಿವಳಿಕೆ ಚುಚ್ಚುಮದ್ದು ನೀಡಲಾಯಿತು ಎಂದು ಅರಣ್ಯ ಇಲಾಖೆ ಸಿಬ್ಬಂದಿ ವಿವರಿಸಿದ್ದಾರೆ.

ಮುಂಜಾನೆ 6.14ರ ಸುಮಾರಿಗೆ ಜಗತ್ಪುರದ ಮೂರನೇ ಬೀದಿಯಲ್ಲಿ ಚಿರತೆ ಕಾಣಿಸಿಕೊಂಡ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿದೆ. ಪೊಲೀಸರು ಇಡೀ ಪ್ರದೇಶವನ್ನು ಸುತ್ತುವರಿದು, ಮನೆಗಳಿಂದ ಹೊರಬರದಂತೆ ಜನರಿಗೆ ಎಚ್ಚರಿಕೆ ನೀಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News