ಲೋಕಸಭಾ ಚುನಾವಣೆ | ಚುನಾವಣಾ ಆಯೋಗದಿಂದ ರಾಜ್ಯಗಳಲ್ಲಿ ವಿಶೇಷ ವೀಕ್ಷಕರ ನೇಮಕ
ಹೊಸದಿಲ್ಲಿ : ಮುಂಬರುವ ಚುನಾವಣೆಗಳಲ್ಲಿ ಸಮಾನ ಸ್ಪರ್ಧೆಗೆ ಅವಕಾಶವನ್ನು ಖಚಿತಪಡಿಸಿಕೊಳ್ಳಲು ಚುನಾವಣಾ ಆಯೋಗವು ಆಡಳಿತಾತ್ಮಕ, ಭದ್ರತೆ ಮತ್ತು ವೆಚ್ಚಗಳ ಮೇಲ್ವಿಚಾರಣೆಗಾಗಿ ಮಂಗಳವಾರ ಹಲವಾರು ರಾಜ್ಯಗಳಲ್ಲಿ ವಿಶೇಷ ವೀಕ್ಷಕರನ್ನು ನೇಮಕಗೊಳಿಸಿದೆ.
ವಿಶೇಷ ವೀಕ್ಷಕರು ಅತ್ಯುತ್ತಮ ಸೇವಾ ದಾಖಲೆಗಳನ್ನು ಹೊಂದಿರುವ ಮಾಜಿ ಸರಕಾರಿ ಅಧಿಕಾರಿಗಳಾಗಿದ್ದು, ವಿಶೇಷವಾಗಿ ಹಣಬಲ,ತೋಳ್ಬಲ ಮತ್ತು ತಪ್ಪುಮಾಹಿತಿಗಳು ಒಡ್ಡಿರುವ ಸವಾಲುಗಳ ಹಿನ್ನೆಲೆಯಲ್ಲಿ ಚುನಾವಣಾ ಪ್ರಕ್ರಿಯೆಯ ಕಟ್ಟುನಿಟ್ಟಿನ ಮೇಲ್ವಿಚಾರಣೆಯ ಹೊಣೆಗಾರಿಕೆಯನ್ನು ವಹಿಸಲಾಗಿದೆ ಎಂದು ಚುನಾವಣಾ ಆಯೋಗವು ತಿಳಿಸಿದೆ.
ಏಳು ಕೋಟಿಗೂ ಅಧಿಕ ಜನಸಂಖ್ಯೆಯನ್ನು ಹೊಂದಿರುವ ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಬಿಹಾರಗಳಲ್ಲಿ ಹಾಗೂ ಏಕಕಾಲದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿರುವ ಆಂಧ್ರಪ್ರದೇಶ ಮತ್ತು ಒಡಿಶಾದಲ್ಲಿ ವಿಶೇಷ ವೀಕ್ಷಕರನ್ನು (ಸಾಮಾನ್ಯ ಮತ್ತು ಪೋಲಿಸ್) ನೇಮಿಸಲಾಗಿದೆ ಎಂದು ಆಯೋಗವು ಹೇಳಿದೆ.
ಆಂಧ್ರ ಪ್ರದೇಶ, ಕರ್ನಾಟಕ, ಉತ್ತರ ಪ್ರದೇಶ ಮತ್ತು ಒಡಿಶಾಗಳಲ್ಲಿ ವಿಶೇಷ ವೆಚ್ಚ ವೀಕ್ಷಕರನ್ನೂ ನೇಮಕಗೊಳಿಸಲಾಗಿದೆ ಎಂದು ಅದು ತಿಳಿಸಿದೆ.