ಲೋಕಸಭಾ ಚುನಾವಣಾ ಫಲಿತಾಂಶ: ಫೈಝಾಬಾದ್ ಮಾತ್ರವಲ್ಲ, ಅಯೋಧ್ಯೆ ಪ್ರದೇಶದಲ್ಲಿ 9 ಲೋಕಸಭಾ ಸ್ಥಾನಗಳ ಪೈಕಿ ಐದನ್ನು ಕಳೆದುಕೊಂಡ ಬಿಜೆಪಿ

Update: 2024-06-07 10:06 GMT

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಲೋಕಸಭಾ ಚುನಾವಣೆಗಳ ಫಲಿತಾಂಶಗಳು ಜೂ.4ರಂದು ಪ್ರಕಟಗೊಂಡಿದ್ದು, ಫೈಝಾಬಾದ್ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷ (ಎಸ್‌ಪಿ)ದ ಅವಧೇಶ ಪ್ರಸಾದ್ ಸಿಂಗ್ ಅವರು ಬಿಜೆಪಿಯ ಸಂಸದ ಲಲ್ಲು ಸಿಂಗ್ ಅವರನ್ನು ಪರಾಭವಗೊಳಿಸಿದ್ದಾರೆ. ಲಲ್ಲು ಸಿಂಗ್ 2014 ಮತ್ತು 2019ರ ಚುನಾವಣೆಗಳಲ್ಲಿ ಈ ಕ್ಷೇತ್ರದಿಂದ ಗೆದ್ದಿದ್ದರು. ರಾಮ ಮಂದಿರವಿರುವ ದೇವಸ್ಥಾನಗಳ ನಗರ ಅಯೋಧ್ಯೆ ಉತ್ತರ ಪ್ರದೇಶದ 80 ಲೋಕಸಭಾ ಕ್ಷೇತ್ರಗಳ ಪೈಕಿ ಒಂದಾಗಿರುವ ಫೈಝಾಬಾದ್‌ನ ವ್ಯಾಪ್ತಿಯಲ್ಲಿದೆ.

ಬಿಜೆಪಿ ಫೈಝಾಬಾದ್‌ನಲ್ಲಿ ಸೋತದ್ದು ಮಾತ್ರವಲ್ಲ, ಅಯೋಧ್ಯೆ ಪ್ರದೇಶದ ಒಂಭತ್ತು ಲೋಕಸಭಾ ಸ್ಥಾನಗಳ ಪೈಕಿ ಐದನ್ನು ಕಳೆದುಕೊಂಡಿದೆ. ಮೇನಕಾ ಗಾಂಧಿ ಸ್ಪರ್ಧಿಸಿದ್ದ ಸುಲ್ತಾನ್‌ಪುರ, ಬಸ್ತಿ, ಅಂಬೇಡ್ಕರ್ ನಗರ ಮತ್ತು ಶ್ರಾವಸ್ಥಿ ಕ್ಷೇತ್ರಗಳಲ್ಲಿಯೂ ಬಿಜೆಪಿ ಸೋಲನ್ನಪ್ಪಿದೆ. ಈ ನಾಲ್ಕೂ ಕ್ಷೇತ್ರಗಳಲ್ಲಿ ಎಸ್‌ಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಶ್ರಾವಸ್ಥಿಯಲ್ಲಿ ಸೋತಿರುವ ಬಿಜೆಪಿ ಅಭ್ಯರ್ಥಿ ಸಾಕೇತ ಮಿಶ್ರಾ ರಾಮ ಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾರ ಪುತ್ರರಾಗಿದ್ದಾರೆ.

ಲೈಂಗಿಕ ಕಿರುಕುಳಗಳ ಆರೋಪಗಳನ್ನು ಎದುರಿಸುತ್ತಿರುವ ಪಕ್ಷದ ನಾಯಕ ಬ್ರಿಜ್‌ಭೂಷಣ ಶರಣ್ ಸಿಂಗ್ ಪುತ್ರ ಕರಣ್ ಭೂಷಣ ಸಿಂಗ್ ಗೆದ್ದಿರುವ ಕೈಸರ್‌ಗಂಜ್ ಹಾಗೂ ಗೊಂಡಾ,‌ ಡೊಮರಿಯಾಗಂಜ್ ಮತ್ತು ಬಹರೈಚ್ ಸೇರಿದಂತೆ ಅಯೋಧ್ಯೆ ಪ್ರದೇಶದ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.

ಅಯೋಧ್ಯೆ ಪ್ರದೇಶವು ಬಿಜೆಪಿಯ ಹಿಂದುತ್ವ ಯೋಜನೆಗೆ, ವಿಶೇಷವಾಗಿ ಉತ್ತರ ಪ್ರದೇಶದಲ್ಲಿ ಪ್ರಮುಖವಾಗಿತ್ತು. 2019ರಲ್ಲಿ ಈ ರಾಜ್ಯದಲ್ಲಿ 80 ಸ್ಥಾನಗಳ ಪೈಕಿ 62 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ 2024ರಲ್ಲಿ ಕೇವಲ 33 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. ಪ್ರತಿಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ ರಾಜ್ಯದಲ್ಲಿ 43 ಸ್ಥಾನಗಳನ್ನು ಗೆದ್ದುಕೊಂಡಿದೆ.

ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ಉದ್ಘಾಟಿಸಿದ್ದರು. ಅಬ್ಬರದ ಪ್ರಚಾರವನ್ನು ಕಂಡಿದ್ದ ಈ ಕಾರ್ಯಕ್ರಮವು 2024ರ ಸಾರ್ವತ್ರಿಕ ಚುನಾವಣೆಗಳಲ್ಲಿ ಬಿಜೆಪಿಗೆ ಚುನಾವಣಾ ಲಾಭಗಳನ್ನು ಒದಗಿಸಲಿದೆ ಎಂದು ಅನೇಕರು ಭಾವಿಸಿದ್ದರು.

ವಾರಣಾಸಿ ಪ್ರದೇಶದಲ್ಲಿಯೂ ಬಿಜೆಪಿಗೆ ಹಿನ್ನಡೆ

ವಾರಣಾಸಿ, ಭದೋಹಿ, ಚಂದೌಲಿ, ಮಿರ್ಝಾಪುರ, ರಾಬರ್ಟ್ಸ್‌ಗಂಜ್, ಘಾಝಿಪುರ, ಜೌನಪುರ, ಮಛ್ಲಿಶಹರ್, ಘೋಸಿ, ಅಜಮ್‌ಗಡ, ಲಾಲಗಂಜ್ ಮತ್ತು ಬಲ್ಲಿಯಾ ಸೇರಿದಂತೆ ವಾರಣಾಸಿ ಪ್ರದೇಶದ 12 ಸ್ಥಾನಗಳ ಪೈಕಿ ಒಂಭತ್ತನ್ನು ಬಿಜೆಪಿ ಕಳೆದುಕೊಂಡಿದೆ.

2019ರ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ತನ್ನ ಮಿತ್ರಪಕ್ಷ ಅಪ್ನಾ ದಳ-ಸೋನಿಲಾಲ್ ಜೊತೆ ವಾರಣಾಸಿ ಪ್ರದೇಶದಲ್ಲಿ ಏಳು ಸ್ಥಾನಗಳನ್ನು ಗೆದ್ದಿದ್ದು, ಜೌನುಪುರ, ಘಾಝಿಪುರ, ಘೋಸಿ, ಲಾಲಗಂಜ್ ಮತ್ತು ಅಝಮ್‌ಗಡ ಕ್ಷೇತ್ರಗಳಲ್ಲಿ ಸೋಲನ್ನಪ್ಪಿತ್ತು. ಆದರೆ ನಂತರ ಉಪಚುನಾವಣೆಯಲ್ಲಿ ಅಜಮ್‌ಗಡ ಕ್ಷೇತ್ರವನ್ನು ಮರಳಿ ಗೆದ್ದಿತ್ತು.

2024ರ ಚುನಾವಣೆಗಳಲ್ಲಿ ಮಿತ್ರಪಕ್ಷ ಅಪ್ನಾ ದಳ-ಸೋನಿಲಾಲ್ ಗೆದ್ದಿರುವ ಒಂದು ಸ್ಥಾನ ಸೇರಿದಂತೆ ಕೇವಲ ಮೂರು ಸ್ಥಾನಗಳಿಗೆ ಬಿಜೆಪಿ ತೃಪ್ತಿ ಪಟ್ಟುಕೊಂಡಿದೆ. ಚಂದೌಲಿ, ರಾಬರ್ಟ್ಸ್‌ಗಂಜ್, ಘಾಝಿಪುರ, ಜೌನಪುರ, ಮಛ್ಲಿಶಹರ್, ಘೋಸಿ, ಅಜಮ್‌ಗಡ, ಲಾಲಗಂಜ್ ಮತ್ತು ಬಲ್ಲಿಯಾ ಕ್ಷೇತ್ರಗಳಲ್ಲಿ ಅದು ಸೋಲನ್ನಪ್ಪಿದೆ.

ಬಿಜೆಪಿ ಈ ಪ್ರದೇಶದಲ್ಲಿ ಗೆದ್ದಿರುವ ಮೂರು ಸ್ಥಾನಗಳಲ್ಲಿ ವಾರಣಾಸಿ,ಮಿರ್ಝಾಪುರ ಮತ್ತು ಭದೋಹಿ ಸೇರಿವೆ.

ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಗೆದ್ದಿದ್ದಾರಾದರೂ ಅವರ ಗೆಲುವಿನ ಅಂತರ 1.5 ಲ.ಮತಗಳಿಗೆ ಕುಸಿದಿದೆ. ಮಿರ್ಝಾಪುರ ಕ್ಷೇತ್ರದಲ್ಲಿ ಕೇಂದ್ರ ಸಚಿವೆ ಹಾಗೂ ಅಪ್ನಾ ದಳ-ಸೋನಿಲಾಲ್ ನಾಯಕಿ ಅನುಪ್ರಿಯಾ ಪಟೇಲ್ ಗೆದ್ದಿದ್ದರೆ,ಭದೋಹಿಯಲ್ಲಿ ಬಿಜೆಪಿಯ ವಿನೋದ ಕುಮಾರ್ ಬಿಂದ್ ಅವರು ಟಿಎಂಸಿಯ ಲಲಿತೇಶ ಪತಿ ತ್ರಿಪಾಠಿಯವರನ್ನು ಸುಮಾರು 44,000 ಅಂತರಗಳ ಮತದಿಂದ ಸೋಲಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News