ಮಧ್ಯಪ್ರದೇಶ| ಬ್ಯಾಂಡ್ ಪ್ರಾಕ್ಟೀಸ್‍ನಲ್ಲಿ ಭಾಗವಹಿಸದ 19 ಪೊಲೀಸರ ಅಮಾನತು; ಹೈಕೋರ್ಟ್‍ಗೆ ಮೊರೆ

Update: 2024-08-02 12:29 GMT

ಸಾಂದರ್ಭಿಕ ಚಿತ್ರ  

ಭೋಪಾಲ್: ಪ್ರತಿ ಜಿಲ್ಲೆಗಳಲ್ಲಿ ಪೊಲೀಸ್ ಬ್ಯಾಂಡ್‍ಗಳನ್ನು ರೂಪಿಸುವ ಮಧ್ಯಪ್ರದೇಶ ಪೊಲೀಸ್ ಇಲಾಖೆಯ ಉಪಕ್ರಮಕ್ಕೆ ಅಡೆ ತಡೆಗಳು ಎದುರಾಗಿದ್ದು, ಹಲವು ಮಂದಿ ಈ ಸಂಬಂಧ ಕೋರ್ಟ್‍ಗೆ ಮೊರೆ ಹೋಗಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭಕ್ಕಾಗಿ ಬ್ಯಾಂಡ್ ಪ್ರಾಕ್ಟೀಸ್‍ಗೆ ಆಗಮಿಸಲು ವಿಫಲವಾದ 19 ಮಂದಿ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದ ಬೆನ್ನಲ್ಲೇ ಹಲವು ಮಂದಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಬ್ಯಾಂಡ್ ತಂಡದಲ್ಲಿ ಹೆಸರು ಸೇರಿಸಿದ್ದರೂ, ಅಭ್ಯಾಸಕ್ಕೆ ಹಾಜರಾಗದ ಪೊಲೀಸ್ ಅಧಿಕಾರಿಗಳನ್ನು ಜುಲೈ 25ರಂದು ರೈಸೆಲ್, ಮಂಡಸೂರ್, ಖಾಂಡ್ವಾ, ಸಿದ್ಧಿ ಮತ್ತು ಹರ್ದಾ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳು ಅಮಾನತು ಮಾಡಿದ್ದರು.

ಈ ಸಂಬಂಧ ಹೊರಡಿಸಿದ ಅಮಾನತು ಆದೇಶದಲ್ಲಿ ಅಶಿಸ್ತು ಮತ್ತು ಮೇಲಧಿಕಾರಿಗಳ ಆದೇಶವನ್ನು ಉಲ್ಲಂಘಿಸಿದ ಆರೋಪ ಹೊರಿಸಲಾಗಿದೆ. ಅಮಾನತು ಅವಧಿಯಲ್ಲಿ ಅವರು ಜೀವನಾಧಾರ ಭತ್ಯೆಯನ್ನು ಕಾನೂನು ಪ್ರಕಾರ ಪಡೆಯಲಿದ್ದು, ಎಸ್ಪಿಯ ಅನುಮತಿ ಇಲ್ಲದೇ ಕೇಂದ್ರ ಕಚೇರಿ ಬಿಡುವಂತಿಲ್ಲ ಹಾಗೂ ಹಾಜರಾತಿಯನ್ನು ನಮೂದಿಸುವಂತೆ ಸೂಚಿಸಲಾಗಿದೆ.

ಪೊಲೀಸ್ ಬ್ಯಾಂಡ್‍ಗೆ ಸೇರಲು ಒಪ್ಪಿಗೆ ನೀಡದಿದ್ದರೂ ಅಥವಾ ಈ ಸಂಬಂಧ ಯಾವುದೇ ಅರ್ಜಿ ಸಲ್ಲಿಸದಿದ್ದರೂ ತಮ್ಮ ಹೆಸರನ್ನು ಬ್ಯಾಂಡ್ ತಂಡಕ್ಕೆ ಸೇರಿಸಲಾಗಿದೆ. ಏಕೆಂದರೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಮತ್ತು ನಿಯತವಾದ ಕೆಲಸಗಳನ್ನು ನಿರ್ವಹಿಸುವಲ್ಲಿ ಗಮನ ಹರಿಸಿದ್ದರಿಂದ ತಂಡವನ್ನು ಸೇರಿಲ್ಲ ಎಂದು ಹಲವು ಮಂದಿ ಅಧಿಕಾರಿಗಳು ಮಧ್ಯಪ್ರದೇಶ ಹೈಕೋರ್ಟ್‍ನ ಜಬಲ್ಪುರ ಮತ್ತು ಗ್ವಾಲಿಯರ್ ಪೀಠಗಳಿಗೆ ಅರ್ಜಿ ಸಲ್ಲಿಸಿದ್ದಾರೆ.

ತಮ್ಮನ್ನು ಬ್ಯಾಂಡ್ ತಂಡಕ್ಕೆ ಸೇರಿಸಿರುವ ಕ್ರಮ ಬೇಕಾಬಿಟ್ಟಿ ಹಾಗೂ ಅಕ್ರಮ ಎಂದು ಅವರು ಪ್ರತಿಪಾದಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News