ಮಧ್ಯಪ್ರದೇಶ: ಬೀಫ್ ಸಾಗಾಟದ ಆರೋಪ; ಬಜರಂಗದಳದ ಕಾರ್ಯಕರ್ತರಿಂದ ಇಬ್ಬರಿಗೆ ಹಲ್ಲೆ

Update: 2023-07-01 15:52 GMT

ಸಾಂದರ್ಭಿಕ ಚಿತ್ರ \ Photo: PTI 

ಭೋಪಾಲ: ಬೀಫ್ ಸಾಗಿಸುತ್ತಿರುವುದಾಗಿ ಆರೋಪಿಸಿ ಇಬ್ಬರಿಗೆ ಬಜರಂಗ ದಳದ ಕಾರ್ಯಕರ್ತರು ದೊಣ್ಣೆಯಿಂದ ಥಳಿಸಿದ ಘಟನೆ ಮಧ್ಯಪ್ರದೇಶದ ಖಾಂಡ್ವಾದಲ್ಲಿ ಬುಧವಾರ ನಡೆದಿದೆ.

ಸಿಹಾಡಾ ಗ್ರಾಮದ ಇಬ್ಬರು ವ್ಯಕ್ತಿಗಳು ಇಂಪ್ಲಿಪುರದಿಂದ ಮೋಟಾರು ಸೈಕಲ್ ಗಳಲ್ಲಿ ಮಾಂಸ ಕೊಂಡೊಯ್ಯುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ. ಖಾಂಡ್ವಾದಲ್ಲಿರುವ ಪಾಲಿಟೆಕ್ನಿಕ್ ಕಾಲೇಜಿನ ಸಮೀಪ ಬಜರಂಗದಳದ ಕಾರ್ಯಕರ್ತರು ಅವರಿಬ್ಬರನ್ನು ತಡೆದು ನಿಲ್ಲಿಸಿದರು. ಅಲ್ಲದೆ, ಬೀಫ್ ಕೊಂಡೊಯ್ಯುತ್ತಿರುವುದಾಗಿ ಆರೋಪಿಸಿದರು.

ಆದರೆ, ಅವರಿಬ್ಬರು ಈ ಆರೋಪವನ್ನು ನಿರಾಕರಿಸಿದರು. ತಾವು ಮಟನ್ ಕೊಂಡೊಯ್ಯುತ್ತಿರುವುದಾಗಿ ಸಮರ್ಥಿಸಿಕೊಂಡರು. ಆದರೆ, ಇದರಿಂದ ತೃಪ್ತರಾಗದ ಬಜರಂಗದಳದ ಕಾರ್ಯಕರ್ತರು ಅವರಿಬ್ಬರಿಗೂ ಥಳಿಸಿದರು. ಅವರ ಬಟ್ಟೆಗಳನ್ನು ಹರಿದು ಹಾಕಿದರು. ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಇಬ್ಬರನ್ನು ಕೂಡ ರಕ್ಷಿಸಿದರು. ಬಜರಂಗದಳದ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿರುವಂತೆ ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ನಗರದ ಖಾಝಿ ಸೈಯದ್ ನಿಸಾರ್, ‘‘ಖಾಂಡ್ವಾದಲ್ಲಿ ಕಸಾಯಿಖಾನೆಗಳ ಬಗ್ಗೆ ಆಡಳಿತ ಕಟ್ಟೆಚ್ಚರ ವಹಿಸಿದೆ. ಆದುದರಿಂದ ಇಲ್ಲಿ ಬೀಫ್ ಸಿಗಲು ಸಾಧ್ಯವಿಲ್ಲ. ಸುಳ್ಳು ಆರೋಪ ಮಾಡುವ ಮೂಲಕ ನಗರದಲ್ಲಿ ಶಾಂತಿ ಕದಡಲು ಕೆಲವು ಸಂಘಟನೆಗಳು ಪಿತೂರಿ ನಡೆಸುತ್ತಿವೆ’’ ಎಂದಿದ್ದಾರೆ.

ಬಜರಂಗ ದಳದ ಜಿಲ್ಲಾ ಸಂಚಾಲಕ ಆದಿತ್ಯ ಮೆಹ್ತಾ, ‘‘ಇಬ್ಬರು ಬೀಫ್ ಕೊಂಡೊಯ್ಯುತ್ತಿರುವುದನ್ನು ನಮ್ಮ ಕಾರ್ಯಕರ್ತರು ಗಮನಿಸಿದರು. ಅವರನ್ನು ಸೆರೆ ಹಿಡಿದರು ಹಾಗೂ ರಾಮೇಶ್ವರ ಚೌಕಿಗೆ ಕರೆ ತಂದರು’’ ಎಂದಿದ್ದಾರೆ. ‘‘ಈ ಬಗ್ಗೆ ಎರಡು ಪ್ರಕರಣಗಳನ್ನು ದಾಖಲಿಸಲಾಗಿದೆ. ಯಾವುದೇ ರಶೀದಿ ಇಲ್ಲದೆ ಮಾಂಸ ಪತ್ತೆಯಾದ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಮಾಂಸದ ಮಾದರಿಯನ್ನು ಪಶು ವೈದ್ಯರು ಪರಿಶೀಲನೆ ನಡೆಸುತ್ತಿದ್ದಾರೆ’’ ಎಂದು ಪೊಲೀಸ್ ಅಧೀಕ್ಷಕ ಸತ್ಯೇಂದ್ರ ಶುಕ್ಲಾ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News