ಮಧ್ಯಪ್ರದೇಶ | ಮಾಧವ್ ರಾಷ್ಟ್ರೀಯ ಉದ್ಯಾನವನ್ನು ಹುಲಿ ಸಂರಕ್ಷಿತ ಪ್ರದೇಶವನ್ನಾಗಿಸುವ ಪ್ರಸ್ತಾವನೆಗೆ ಅನುಮೋದನೆ
ಭೋಪಾಲ್: ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿನ ಮಾಧವ್ ರಾಷ್ಟ್ರೀಯ ಉದ್ಯಾನವನವನ್ನು ಹುಲಿ ಸಂರಕ್ಷಿತ ಪ್ರದೇಶವನ್ನಾಗಿಸುವ ಪ್ರಸ್ತಾವನೆಗೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ(NTCA) ತಾಂತ್ರಿಕ ಸಮಿತಿ ರವಿವಾರ ಅನುಮೋದನೆ ನೀಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಾಧವ್ ರಾಷ್ಟ್ರೀಯ ಉದ್ಯಾನವನ ಮಧ್ಯಪ್ರದೇಶದ ಎಂಟನೇ ಹುಲಿ ಸಂರಕ್ಷಿತ ಪ್ರದೇಶವಾಗಲಿದೆ. ಕನ್ಹಾ, ಸಾತ್ಪುರ, ಬಾಂಧವಗಢ, ಪೆಂಚ್, ಸಂಜಯ್ ದುಬ್ರಿ, ಪನ್ನಾ ಮತ್ತು ವೀರಾಂಗಣ ದುರ್ಗಾವತಿಗಳು ಮಧ್ಯಪ್ರದೇಶದಲ್ಲಿ ಈಗ ಅಸ್ತಿತ್ವದಲ್ಲಿರುವ ಹುಲಿ ಸಂರಕ್ಷಿತ ಪ್ರದೇಶಗಳಾಗಿವೆ.
ಎನ್ಟಿಸಿಎ( NTCA) ತಾಂತ್ರಿಕ ಸಮಿತಿಯು ಮಾಧವ್ ರಾಷ್ಟ್ರೀಯ ಉದ್ಯಾನವನ್ನು ಹುಲಿ ಸಂರಕ್ಷಿತ ಪ್ರದೇಶವೆಂದು ಸೂಚಿಸುವ ಪ್ರಸ್ತಾವನೆಯನ್ನು ಅನುಮೋದಿಸಿದೆ. ಈ ಉದ್ಯಾನವನವು ಒಟ್ಟು 1,751 ಚದರ ಕಿ.ಮೀ ವಿಸ್ತೀರ್ಣವನ್ನು ಹೊಂದಿದೆ. ಅದರಲ್ಲಿ 375 ಚದರ ಕಿ.ಮೀ. ಕೋರ್ ಪ್ರದೇಶ ಮತ್ತು 1,276 ಚದರ ಕಿ.ಮೀ ಬಫರ್ ಪ್ರದೇಶ ಒಳಗೊಂಡಿರುತ್ತದೆ. ಸಮಿತಿಯು ಉದ್ಯಾನದೊಳಗೆ ಹುಲಿ ಬಿಡುಗಡೆ ಮಾಡಲು ಅನುಮೋದನೆ ನೀಡಿದೆ ಎಂದು ಹೆಚ್ಚುವರಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಲ್ ಕೃಷ್ಣಮೂರ್ತಿ ತಿಳಿಸಿದ್ದಾರೆ.
ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರ ನಿರ್ದೇಶನದ ಮೇರೆಗೆ ಪ್ರಸ್ತಾವನೆಯನ್ನು ಸಿದ್ಧಪಡಿಸಲಾಗಿದೆ. ಮಧ್ಯಪ್ರದೇಶ ಸರ್ಕಾರದ ಈ ಕ್ರಮವು ಮಾಧವ್ ರಾಷ್ಟ್ರೀಯ ಉದ್ಯಾನವನ ಮತ್ತು ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ವನ್ಯಜೀವಿಗಳ ಸಂರಕ್ಷಣೆಯನ್ನು ಉತ್ತೇಜಿಸುತ್ತದೆ. ಆ ಪ್ರದೇಶ ಮತ್ತು ಪ್ರವಾಸೋದ್ಯಮದ ಅಭಿವೃದ್ಧಿಗೆ ಉತ್ತೇಜನವನ್ನು ನೀಡುತ್ತದೆ ಎಂದು ಕೃಷ್ಣಮೂರ್ತಿ ಹೇಳಿದ್ದಾರೆ.
ಕುನೊ ರಾಷ್ಟ್ರೀಯ ಉದ್ಯಾನವನವು ದೇಶದ ಚಿರತೆಗಳ ಏಕೈಕ ವಾಸಸ್ಥಾನವಾಗಿದೆ. ಇದು ಶಿಯೋಪುರ್ ಜಿಲ್ಲೆಯಲ್ಲಿದೆ ಮತ್ತು ಮಾಧವ್ ರಾಷ್ಟ್ರೀಯ ಉದ್ಯಾನವನಕ್ಕೆ ಸಮೀಪದಲ್ಲಿದೆ.
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಮತ್ತು ಭಾರತೀಯ ವನ್ಯಜೀವಿ ಸಂಸ್ಥೆ ಬಿಡುಗಡೆ ಮಾಡಿದ ʼCo-predators & Prey in India-2022' ವರದಿ ಪ್ರಕಾರ, ಮಧ್ಯಪ್ರದೇಶದಲ್ಲಿ 785 ಹುಲಿಗಳಿದ್ದು, ಇದು ದೇಶದಲ್ಲೇ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯವಾಗಿದೆ. ಕರ್ನಾಟಕವು 563 ಹುಲಿಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದು, ಉತ್ತರಾಖಂಡ 560 ಹುಲಿಗಳೊಂದಿಗೆ ನಂತರದ ಸ್ಥಾನದಲ್ಲಿದೆ.