ಮಧ್ಯಪ್ರದೇಶ: ದೇಗುಲದ ಬಳಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ; ಇಬ್ಬರ ಬಂಧನ

Update: 2023-07-29 03:04 GMT

ಭೋಪಾಲ್: ಮಧ್ಯಪ್ರದೇಶದ ಕಾಡಿನಲ್ಲಿರುವ ಪ್ರಸಿದ್ಧ ದೇವಾಲಯವೊಂದರ ಸಮೀಪ 11 ವರ್ಷದ ಬಾಲಕಿಯ ಮೇಲೆ ಅಮಾನುಷ ಸಾಮೂಹಿಕ ಅತ್ಯಾಚಾರ ನಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿಯ ದೇಹ ರಕ್ತಸಿಕ್ತವಾಗಿದ್ದು ಎಲ್ಲೆಡೆ ಕಚ್ಚಿದ ಗುರುತುಗಳು ಕಾಣಿಸುತ್ತಿವೆ. ಬಾಲಕಿಯ ದೇಹಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದ್ದು, ಈ ಪೈಕಿ ಒಬ್ಬ ದೇವಾಲಯ ಸಮಿತಿ ನಡೆಸುತ್ತಿದ್ದ ಗೋಶಾಲೆಯ ಕಾರ್ಮಿಕ ಎಂದು ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ. ಆರೋಪಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮತ್ತು ಬಾಲಕಿಗೆ ಸಾಧ್ಯವಿರುವ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸೂಚನೆ ನೀಡಿದ್ದಾರೆ.

ಗುರುವಾರ ಸಂಜೆ ಬಾಲಕಿ ನಾಪತ್ತೆಯಾಗಿದ್ದು, ತಡರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ಬಾಲಕಿಯ ಕುಟುಂಬದವರು ಹುಡುಕಲು ಆರಂಭಿಸಿದ್ದರು. ಶುಕ್ರವಾರ ಬೆಳಿಗ್ಗೆ ಸಾತ್ನಾ ಜಿಲ್ಲೆಯ ಮೈಹರ್ ಪೊಲೀಸ್ ಠಾಣೆ ವ್ಯಾಪ್ತಿಯ ಅರ್ಕಂಡಿ ಟೌನ್‍ ಶಿಪ್ ಪಕ್ಕದ ಕಾಡಿನಲ್ಲಿ ಬಾಲಕಿ ಪತ್ತೆಯಾದಳು. ಈ ಕಾಡು, ದೇಶದ ಎಲ್ಲೆಡೆಗಳಿಂದ ಯಾತ್ರಾರ್ಥಿಗಳನ್ನು ಆಕರ್ಷಿಸುವ ಶಾರದಾಮಾತೆಯ ದೇವಾಲಯಕ್ಕೆ ಸಮೀಪದಲ್ಲಿದೆ.

ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಿದ ತಕ್ಷಣ ಪೊಲೀಸರು ಮೈಹರ್ ಸಿವಿಲ್ ಆಸ್ಪತ್ರೆಗೆ ಬಾಲಕಿಯನ್ನು ದಾಖಲಿಸಿದರು. ಈ ಸುದ್ದಿ ಹರಡುತ್ತಿದ್ದಂತೆ ಉದ್ರಿಕ್ತ ಗ್ರಾಮಸ್ಥರು ಆಸ್ಪತ್ರೆ ಮುಂದೆ ಜಮಾಯಿಸಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮುನ್ಸೂಚನೆಯ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ಆಯೋಜಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News