ಮಧ್ಯಪ್ರದೇಶ: ಇಬ್ಬರು ದಲಿತ ಯುವಕರಿಗೆ ಹಲ್ಲೆ; 6 ಮಂದಿಯ ಬಂಧನ
ಭೋಪಾಲ: ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ ಬಾಲಕಿಯರಿಗೆ ಕಿರುಕುಳ ನೀಡಿದ್ದಾರೆ ಎಂದು ಶಂಕಿಸಿ ಇಬ್ಬರು ದಲಿತ ಯುವಕರಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.
ಈ ಘಟನೆ ಶಿವಪುರಿಯ ನರ್ವಾರ್ ಪ್ರದೇಶದ ವರ್ಖಾಡಿಯಲ್ಲಿ ಜೂನ್ 30ರಂದು ನಡೆದಿದೆ. ಈ ಯುವಕರಿಗೆ ಥಳಿಸಲಾಗಿದೆ ಹಾಗೂ ಮುಖಕ್ಕೆ ಮಸಿ ಬಳಿಯಲಾಗಿದೆ. ಅಲ್ಲದೆ, ಚಪ್ಪಲಿ ಹಾರ ಹಾಕಿ ಗ್ರಾಮದಲ್ಲಿ ಮೆರವಣಿಗೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಾವು ಇಬ್ಬರು ಮಹಿಳೆಯರು ಸೇರಿದಂತೆ 7 ಮಂದಿಯ ವಿರುದ್ಧ ಭಾರತೀಯ ದಂಡ ಸಂಹಿತೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯ ಸಂಬಂಧಿತ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ಪ್ರಕರಣ ದಾಖಲಿಸಲಾದ 7 ಮಂದಿಯಲ್ಲಿ 6 ಮಂದಿಯನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
‘‘ದಲಿತ ಸಮುದಾಯಕ್ಕೆ ಸೇರಿದ ಈ ಇಬ್ಬರು ದಲಿತ ಯುವಕರು ಗ್ರಾಮದಲ್ಲಿ ಕೆಲವು ಬಾಲಕಿಯರಿಗೆ ಕಿರುಕುಳ ನೀಡಿದ್ದಾರೆ. ಬಾಲಕಿಯರ ವೀಡಿಯೊ ದಾಖಲು ಮಾಡಿದ್ದಾರೆ ಎಂದು ಆರೋಪಿಗಳು ಪ್ರತಿಪಾದಿಸಿದ್ದಾರೆ. ಅಲ್ಲದೆ, ಅವರಿಬ್ಬರ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ ಎಂದು ಹೇಳಿದ್ದಾರೆ’’ ಎಂದು ಮಾಗ್ರೋನಿ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ದೀಪಕ್ ಶರ್ಮಾ ತಿಳಿಸಿದ್ದಾರೆ.
ಆದರೆ, ತನಿಖೆ ಸಂದರ್ಭ ಈ ಇಬ್ಬರು ದಲಿತ ಯುವಕರ ಮೇಲಿನ ಆರೋಪ ಸುಳ್ಳು ಎಂದು ತಿಳಿದು ಬಂದಿದೆ ಎಂದು ಅವರು ಹೇಳಿದ್ದಾರೆ. ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ ಮಿಶ್ರಾ ಅವರು ಈ ಘಟನೆಯನ್ನು ಖಂಡಿಸಿದ್ದು, ತಾಲಿಬಾನ್ ಕೃತ್ಯ ಮಾನವೀಯತೆಗೆ ಅವಮಾನ ಎಂದಿದ್ದಾರೆ. ಇಂತಹ ಕೃತ್ಯಗಳನ್ನು ಸಹಿಸಲು ಸಾಧ್ಯವಿಲ್ಲ. ಹೆಚ್ಚಿನ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿ ಪ್ರಕರಣ ದಾಖಲಿಸುವಂತೆ ಹಾಗೂ ಕಾನೂನು ಬಾಹಿರವಾಗಿ ನಿರ್ಮಿಸಿದ ಅವರ ಸೊತ್ತುಗಳನ್ನು ನೆಲಸಮಗೊಳಿಸುವಂತೆ ಸ್ಥಳೀಯ ಆಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.