ಮದ್ರಸಾಗಳಿಗೆ ಆರ್ಥಿಕ ನೆರವು ನಿಲ್ಲಿಸುವಂತೆ ರಾಜ್ಯಗಳಿಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಪತ್ರ

Update: 2024-10-13 16:22 GMT

ಹೊಸದಿಲ್ಲಿ : ಮದ್ರಸಾಗಳು ಹಾಗೂ ಮದ್ರಸಾ ಮಂಡಳಿಗಳಿಗೆ ಹಣಕಾಸು ನೆರವನ್ನು ನಿಲ್ಲಿಸುವಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತಗಳ ಮುಖ್ಯ ಕಾರ್ಯದರ್ಶಿಗಳು ಹಾಗೂ ಆಡಳಿತಾಧಿಕಾರಿಗಳಿಗೆ ಪತ್ರ ಬರೆದಿದೆ.

ಮುಸ್ಲಿಮರು ಅಥವಾ ಇನ್ನ್ಯಾರೇ ಆದರೂ, ಅವರೆಲ್ಲರೂ 2009ರ ಶಿಕ್ಷಣದ ಹಕ್ಕು ಕಾಯ್ದೆಯಡಿ ಮಾನ್ಯತೆ ಪಡೆದ ಶಾಲೆಗಳಲ್ಲಿ ಮಾತ್ರವೇ ದಾಖಲಾಗಿರಬೇಕೆಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಪ್ರಿಯಾಂಕ್ ಕಾನುನಗೊ ಅವರು ಪತ್ರದಲ್ಲಿ ತಿಳಿಸಿದ್ದಾರೆ.

‘‘ಆರ್ಟಿಇ ಕಾಯ್ದೆ 2009ರಿಂದ ಧಾರ್ಮಿಕ ಶಿಕ್ಷಣಸಂಸ್ಥೆಗಳನ್ನು ಹೊರತುಪಡಿಸಿರುವುದು, ಕೇವಲ ಧಾರ್ಮಿಕ ಶಿಕ್ಷಣಸಂಸ್ಥೆಗಳಿಗೆ ಮಾತ್ರ ಹಾಜರಾಗುತ್ತಿರುವ ಮಕ್ಕಳನ್ನು ಸಾಮಾನ್ಯ ಶಿಕ್ಷಣ ವ್ಯವಸ್ಥೆಯಿಂದ ಹೊರಗಿಟ್ಟಂತಾಗಿದೆ. ಮಕ್ಕಳನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ರೂಪಿಸಲಾದ ಕಾಯ್ದೆಯು ತಪ್ಪು ವ್ಯಾಖ್ಯಾನದಿಂದಾಗಿ ಅವಕಾಶ ವಂಚಿತರಾಗುವ ಹಾಗೂ ತಾರತಮ್ಯದ ಹೊಸ ಪದರಗಳು ಸೃಷ್ಟಿಯಾಗಿವೆ ’’ ಎಂದು ಅವರು ಹೇಳಿದ್ದಾರೆ.

‘ಧರ್ಮದ ಪಾಲಕರು ಅಥವಾ ಹಕ್ಕುಗಳ ದಮನಕಾರರು : ಮಕ್ಕಳ ಸಾಂವಿಧಾನಿಕ ಹಕ್ಕುಗಳ ವರ್ಸಸ್ ಮದ್ರಸಾಗಳು ’ಎಂಬ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗದ ವರದಿಯನ್ನು ಆಧರಿಸಿ ಕಾನುನಗೊ ಅವರು ಈ ಪತ್ರವನ್ನು ಬರೆದಿದ್ದಾರೆ.

ಮದ್ರಸ ಶಿಕ್ಷಣ ಮಂಡಳಿಗಳನ್ನು ಮುಚ್ಚಲು ಕ್ರಮಗಳನ್ನು ಕೈಗೊಳ್ಳುವಂತೆಯೂ ಕಾನೂನಗೊ ಅವರು ರಾಜ್ಯಗಳು ಹಾಗೂ ಕೇಂದ್ರಾಡಳಿತಗಳನ್ನು ಆಗ್ರಹಿಸಿದ್ದಾರೆ. ಆದರೆ ಈ ಕುರಿತ ಅಂತಿಮ ನಿರ್ಧಾರವು ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆಗೆ ಬಾಕಿಯಿರುವ ಪ್ರಕರಣದ ತೀರ್ಪಿಗೆ ಒಳಪಟ್ಟಿರುತ್ತದೆ ಎಂದವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಮಕ್ಕಳಿಗೆ ಸಮರ್ಪಕ ಶಿಕ್ಷಣವನ್ನು ಪಡೆಯಲು ಮದ್ರಸಾಗಳು ಯೋಗ್ಯವಾಗಿಲ್ಲ . ಅಲ್ಲದೆ ಶಿಕ್ಷಣದ ಹಕ್ಕು ಕಾಯ್ದೆಯಡಿ ಮದ್ರಸಾಗಳು ಶಾಲೆಗಳೆಂದು ಪರಿಗಣಿಸಲ್ಪಡುವುದಿಲ್ಲ ಎಂದು ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸೆಪ್ಟೆಂಬರ್ನಲ್ಲಿ ಸುಪ್ರೀಂಕೋರ್ಟ್ ಗೆ ತಿಳಿಸಿತ್ತು.

2004ರ ಉತ್ತರಪ್ರದೇಶ ಮದ್ರಸ ಶಿಕ್ಷಣ ಮಂಡಳಿ ಕಾಯ್ದೆಯನ್ನು ರದ್ದುಪಡಿಸಬೇಕೆಂಬ ಅಲಹಾಬಾದ್ ಹೈಕೋರ್ಟ್ ಮಾರ್ಚ್ 22ರಂದು ನೀಡಿದ ತೀರ್ಪು ಅಸಂವಿಧಾನಿಕವೆಂದು ವಾದಿಸಿ ಸಲ್ಲಿಸಲಾದ ಅರ್ಜಿಯೊಂದರ ವಿಚಾರಣೆ ಸಂದರ್ಭ ಅದು ಈ ಉತ್ತರವನ್ನು ನೀಡಿತ್ತು.

ಉತ್ತರಪ್ರದೇಶ ಮದ್ರಸ ಶಿಕ್ಷಣ ಮಂಡಳಿ ಕಾಯ್ದೆಯು ಆ ರಾಜ್ಯದ ಮದ್ರಸಗಳ ಕಾರ್ಯನಿರ್ವಹಣೆಯನ್ನು ನಿಯಂತ್ರಿಸುತ್ತದೆ. ಜಾತ್ಯತೀತತೆ ಹಾಗೂ ಮೂಲಭೂತ ಹಕ್ಕುಗಳ ಕುರಿತದ ಸಂವಿಧಾನದ ತತ್ವಗಳನ್ನು ಉಲ್ಲಂಘಿಸುತ್ತಿದೆಯೆಂಬ ನೆಲೆಯಲ್ಲಿ ಈ ಕಾಯ್ದೆಯನ್ನು ರದ್ದುಪಡಿಸುವಂತೆ ಅಲಹಾಬಾದ್ ಹೈಕೋರ್ಟ್ ಆದೇಶಿಸಿತ್ತು.

ಸಾಮಾನ್ಯ ಶಾಲೆಗಳಿಗೆ ಮದ್ರಸಾ ವಿದ್ಯಾರ್ಥಿಗಳ ವರ್ಗಾವಣೆಗೂ ಹೈಕೋರ್ಟ್ ಆದೇಶಿಸಿದೆ. ಆದರೆ ಎಪ್ರಿಲ್ ನಲ್ಲಿ ಸುಪ್ರೀಂಕೋರ್ಟ್ ಈ ತೀರ್ಪಿಗೆ ತಡೆಯಾಜ್ಞೆ ನೀಡಿತ್ತು.

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಶಿಫಾರಸುಗಳನ್ನು ಸಮಾಜವಾದಿ ಪಕ್ಷದ ವರಿಷ್ಠ ಅಖಿಲೇಶ್ ಯಾದವ್ ಅವರು ಟೀಕಿಸಿದ್ದರು. ರಾಜ್ಯದ ಶಿಕ್ಷಣ ಸಂಸ್ಥೆಗಳ ಮೇಲೆ ಬಿಜೆಪಿ ಸರಕಾರವು ನಿಯಂತ್ರಣವನ್ನು ಸಾಧಿಸಲು ಯತ್ನಿಸುತ್ತಿದೆಯೆಂದು ಆಪಾದಿಸಿದ್ದಾರೆ.

‘‘ ಒಂದು ವೇಳೆ ಶಿಕ್ಷಣದಲ್ಲಿ ಸಮಸ್ಯೆಯಿದ್ದರೆ, ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಅವರು ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಒಂದು ವೇಳೆ ಅವರಿಗೆ ಅಧಿಕಾರವಿರುತ್ತಿದ್ದರೆ, ಮದ್ರಸಾ ಆಗಲಿ ಅಥವಾ ಇನ್ನ್ಯಾವುದೇ ಸಂಸ್ಥೆಯಾಗಿರಲಿ, ಸಂಸ್ಕೃತ ಶಾಲೆಗಳನ್ನು ಕೂಡಾ ಮುಚ್ಚಿಬಿಡುತ್ತಿದ್ದರು. ಪ್ರತಿಯೊಂದು ಕೂಡಾ ಅವರ ನಿಯಂತ್ರಣದಲ್ಲಿರಬೇಕೆಂದು ಬಯಸುತ್ತಿದ್ದಾರೆ’’ ಎಂದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News