ಮ್ಯಾಡ್ರಿಡ್ ಓಪನ್ | ಅಲ್ಕರಾಝ್, ಸಬಲೆಂಕಾ ಪ್ರಿ-ಕ್ವಾರ್ಟರ್ ಫೈನಲ್‌ಗೆ
ಹೊಸದಿಲ್ಲಿ : ಕಾರ್ಲೊಸ್ ಅಲ್ಕರಾಝ್ ಹಾಗೂ ಅರ್ಯನಾ ಸಬಲೆಂಕಾ ಮ್ಯಾಡ್ರಿಡ್ ಓಪನ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಪ್ರಿ-ಕ್ವಾರ್ಟರ್ ಫೈನಲ್‌ಗೆ ತೇರ್ಗಡೆಯಾದರು.
ರವಿವಾರ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಅಲ್ಕರಾಝ್ ಅವರು ಥಿಯಾಗೊ ಸೆಬೊಥ್‌ರನ್ನು 6-3, 6-3 ನೇರ ಸೆಟ್‌ಗಳ ಅಂತರದಿಂದ ಮಣಿಸಿ ಅಂತಿಮ-16ರ ಸುತ್ತು ತಲುಪಿದ್ದಾರೆ.
ಹಾಲಿ ಚಾಂಪಿಯನ್ ಅಲ್ಕರಾಝ್ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಕಳೆದ ವರ್ಷದ ರನ್ನರ್ಸ್ ಅಪ್ ಜಾನ್ ಲೆನಾರ್ಡ್ ಸ್ಟ್ರಫ್‌ರನ್ನು ಎದುರಿಸಲಿದ್ದಾರೆ.
ಗಾಯದ ಸಮಸ್ಯೆಯಿಂದಾಗಿ ಒಂದು ತಿಂಗಳ ಕಾಲ ಟೆನಿಸ್‌ನಿಂದ ದೂರ ಉಳಿದಿದ್ದ ಅಲ್ಕರಾಝ್ ತನ್ನ ಪ್ರದರ್ಶನದ ಬಗ್ಗೆ ಸಂತೃಪ್ತಿ ವ್ಯಕ್ತಪಡಿಸಿದರು.
ಮತ್ತೊಂದು ಪಂದ್ಯದಲ್ಲಿ ಅಲೆಕ್ಸಾಂಡರ್ ಝ್ವೆರೆವ್ ಅವರು ಡೆನಿಸ್ ಶಪೊವಾಲೊವ್‌ರನ್ನು 6-4, 7-5 ಸೆಟ್‌ಗಳ ಅಂತರದಿಂದ ಸೋಲಿಸಿದರು.
ಅಲೆಜಾಂಡ್ರೊ ಡೇವಿಡೋವಿಚ್ ಫೊಕಿನಾರನ್ನು 7-6(12/10), 6-4 ಸೆಟ್‌ಗಳ ಅಂತರದಿಂದ ಮಣಿಸಿದ ಆಂಡ್ರೆ ರುಬ್ಲೇವ್ ಮೊದಲ ಸೆಟ್ ಹಿನ್ನಡೆಯ ನಂತರ ಪ್ರಬಲ ಪ್ರತಿರೋಧ ಒಡ್ಡಿದರು.
ಎರಡೂವರೆ ಗಂಟೆ ಕಾಲ ನಡೆದ ಮಹಿಳೆಯರ ಸಿಂಗಲ್ಸ್ ಹಣಾಹಣಿಯಲ್ಲಿ ವಿಶ್ದದ ನಂ.2ನೇ ಆಟಗಾರ್ತಿ ಅರ್ಯನಾ ಸಬಲೆಂಕಾ 19ರ ಹರೆಯದ ರಾಬಿನ್ ಮೊಂಟ್ಗೊಮೆರಿ ಅವರಿಂದ ಕಠಿಣ ಸವಾಲನ್ನು ಎದುರಿಸಿದ್ದರೂ ಅಂತಿಮವಾಗಿ 6-1, 6-7(5/7), 6-4 ಅಂತರದಿಂದ ಜಯ ದಾಖಲಿಸಿದರು.
ವಿಶ್ವದ ನಂ.4ನೇ ಆಟಗಾರ್ತಿ ಎಲೆನಾ ರಿಬಾಕಿನಾ ಅವರು ಮಯರ್ ಶೆರಿಫ್ ವಿರುದ್ಧ 6-1, 6-4 ನೇರ ಸೆಟ್‌ಗಳ ಅಂತರದಿಂದ ಜಯ ದಾಖಲಿಸಿ ಅಂತಿಮ-16ರ ಸುತ್ತು ತಲುಪಿದ್ದಾರೆ. ಮುಂದಿನ ಸುತ್ತಿನಲ್ಲಿ ಯುವ ಆಟಗಾರ್ತಿ ಸಾರಾ ಬೆಜ್ಲಿಕ್‌ರನ್ನು ಎದುರಿಸಲಿದ್ದಾರೆ.
ಇದೇ ವೇಳೆ 17ರ ಹರೆಯದ ಮಿರ್ರಾ ಆ್ಯಂಡ್ರೀವಾ ವಿಂಬಲ್ಡನ್ ಚಾಂಪಿಯನ್ ಮರ್ಕೆಟಾ ವೊಂಡ್ರೋಸೋವಾರನ್ನು 7-5, 6-1 ಸೆಟ್‌ಗಳ ಅಂತರದಿಂದ ಸೋಲಿಸಿ ಶಾಕ್ ನೀಡಿದರು.