ʼಮಹಾʼ ಬಿಕ್ಕಟ್ಟು | ಸರಕಾರಕ್ಕೆ ಬಾಹ್ಯ ಬೆಂಬಲ ನೀಡಲಿದೆಯೇ ʼಶಿಂಧೆʼ ಸೇನೆ?
ಮುಂಬೈ : ಮಹಾರಾಷ್ಟ್ರದ ನಿಯೋಜಿತ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಿಜೆಪಿಗೆ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟು ಕೊಡಲು ಒಪ್ಪಿಕೊಂಡರೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ನೀಡಿದ ರಾಜೀ ಸೂತ್ರಕ್ಕೆ ಈಗಲೂ ಅಂಟಿಕೊಂಡಿದ್ದಾರೆ ಎಂದು ಶಿವಸೇನೆ ಮೂಲಗಳು ತಿಳಿಸಿವೆ.
288 ಸದಸ್ಯ ಬಲದ ರಾಜ್ಯ ವಿಧಾನ ಸಭೆಯಲ್ಲಿ ಮಹಾಯುತಿ 230 ಸ್ಥಾನಗಳನ್ನು ಗೆದ್ದುಕೊಂಡ ಬಳಿಕ ಅಧಿಕಾರ ಹಂಚಿಕೆ ಕುರಿತು ಚರ್ಚಿಸಲು ಏಕನಾಥ್ ಶಿಂಧೆ, ದೇವೇಂದ್ರ ಫಡ್ನವಿಸ್ ಹಾಗೂ ಅಜಿತ್ ಪವಾರ್ ಅವರು ಅಮಿತ್ ಶಾ ಅವರನ್ನು ಭೇಟಿಯಾಗಿದ್ದರು.
ತನ್ನ ನೇತೃತ್ವದಲ್ಲಿ ವಿಧಾನ ಸಬೆ ಚುನಾವಣೆ ನಡೆದಿರುವುದರಿಂದ ಮಹಿಳಾ ಮತದಾರರು, ಮರಾಠರು ಹಾಗೂ ಇತರ ಹಿಂದುಳಿದ ವರ್ಗದ ಮತದಾರರು ಲಾಡ್ಲಿ ಬಹೆನಾ ಯೋಜನೆ, ಮೀಸಲಾತಿ ನಿರ್ಧಾರ ಹಾಗೂ ವಿವಿಧ ಸಮುದಾಯಗಳಿಗೆ ಅನುಕ್ರಮವಾಗಿ ಸಹಕಾರಿ ಮಂಡಳಿಗಳ ಸ್ಥಾಪನೆಯಿಂದಾಗಿ ‘ಮಹಾಯುತಿ’ಗೆ ಮತ ಹಾಕಿದ್ದಾರೆ ಎಂದು ಶಿಂಧೆ ಅವರು ಅಮಿತ್ ಶಾ ಅವರಿಗೆ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.
‘‘ತಾನು ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿಯಾಗುತ್ತೇನೆ ಎಂಬ ನಿರೀಕ್ಷೆಯಿಂದ ಅವರು ಮತ ಹಾಕಿದ್ದಾರೆ. ಒಂದು ವೇಳೆ ತನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡದೇ ಇದ್ದರೆ, ಸಮಾಜದ ಈ ವರ್ಗಗಳಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಅವರು ಅಮಿತ್ ಶಾ ಅವರಿಗೆ ತಿಳಿಸಿದ್ದಾರೆೆ’’ ಎಂದು ಅವು ಹೇಳಿವೆ.
‘‘ಜನರು ತನ್ನನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿರುವ ಎರಡು ಸಮೀಕ್ಷೆಗಳನ್ನು ಕೂಡ ಅವರು ಅಮಿತ್ ಶಾ ಅವರಿಗೆ ತೋರಿಸಿದ್ದಾರೆ’’ ಎಂದು ಹೆಸರು ಹೇಳಲಿಚ್ಛಿಸದ ಶಿವಸೇನೆಯ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
ಫಡ್ನವಿಸ್ ಅವರನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡಿದರೆ, ರಾಜ್ಯದಲ್ಲಿ ಅಧಿಕಾರವನ್ನು ಸಮತೋಲನಗೊಳಿಸಲು ಪ್ರಮುಖ ಖಾತೆಗಳಾದ ಗೃಹ, ಹಣಕಾಸು, ಮತ್ತು ಕಂದಾಯ ಖಾತೆಗಳನ್ನು ತನಗೆ ನೀಡಬೇಕು ಎಂದು ಅವರು ಅಮಿತ್ ಶಾ ಅವರಿಗೆ ತಿಳಿಸಿದ್ದಾರೆ. ತಾನು ಯಾರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಹೇಳುತ್ತೇನೋ ಅವರಿಗೆ ಹುದ್ದೆ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಒಂದು ವೇಳೆ ಈ ಮೂರು ಖಾತೆಗಳನ್ನು ಶಿವಸೇನೆಗೆ ನೀಡದೇ ಇದ್ದರೆ, ತನ್ನ ಪಕ್ಷ ಸರಕಾರದ ಭಾಗವಾಗುವುದಿಲ್ಲ. ರಾಜ್ಯದಲ್ಲಿ ಶಿವಸೇನೆ ಬಾಹ್ಯಾ ಬೆಂಬಲ ನೀಡಲಿದೆ ಹಾಗೂ ಪಕ್ಷದ 7 ಮಂದಿ ಲೋಕಸಭಾ ಸದಸ್ಯರು ಕೂಡ ಹಿಂದುತ್ವದ ಕಾರಣಕ್ಕೆ ನರೇಂದ್ರ ಮೋದಿ ಅವರ ಸರಕಾರಕ್ಕೆ ಬಾಹ್ಯಾ ಬೆಂಬಲ ನೀಡಿಲಿದ್ದಾರೆ ಎಂದು ಅವರು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.