ಮಹಾರಾಷ್ಟ್ರದ ಚುನಾವಣೆಯು ಇಬ್ಬರು ಕೋಟ್ಯಾಧಿಪತಿ ಹಾಗೂ ಬಡವರ ನಡುವಿನ ಹೋರಾಟವಾಗಿದೆ: ರಾಹುಲ್ ಗಾಂಧಿ
ಮುಂಬೈ: ಮಹಾರಾಷ್ಟ್ರದ ಚುನಾವಣೆಯು ಇಬ್ಬರು ಕೋಟ್ಯಾಧಿಪತಿಗಳು ಹಾಗೂ ಬಡವರ ನಡುವಿನ ಹೋರಾಟವಾಗಿದೆ ಎಂದು ಸೋಮವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, “ಕೇವಲ ಒಬ್ಬ ಕೋಟ್ಯಾಧಿಪತಿಗೆ ರೂ.1 ಲಕ್ಷ ಕೋಟಿ ಬೇಕಿದೆ. ಮಹಾರಾಷ್ಟ್ರದ ಯುವಕರು ಹಾಗೂ ಬಡವರಿಗೆ ನೆರವಿನ ಅಗತ್ಯವಿದೆ ಎಂದು ನಾವು ಭಾವಿಸಿದ್ದೇವೆ. ಹಣದುಬ್ಬರ, ಬೆಲೆಯೇರಿಕೆ, ಬಡತನ, ನಿರುದ್ಯೋಗ ಈ ಚುನಾವಣೆಯ ಪ್ರಮುಖ ವಿಷಯಗಳಾಗಿವೆ” ಎಂದು ಹೇಳಿದರು.
ಜಾತಿಗಣತಿ ಕುರಿತು ಮಾತನಾಡಿದ ಅವರು, “ಇಂದು ದೇಶದಲ್ಲಿ ಇದು ಬಹುದೊಡ್ಡ ವಿಷಯವಾಗಿದೆ. ದೇಶದ ಜನಸಂಖ್ಯೆಯಲ್ಲಿ ದಲಿತರು ಮತ್ತು ಆದಿವಾಸಿಗಳು ಶೇ. 50ರಷ್ಟಿದ್ದರೂ, ವ್ಯವಸ್ಥೆಯಲ್ಲಿ ಅವರ ಮಾತು ನಡೆಯುತ್ತಿಲ್ಲ. ಅದನ್ನು ಬದಲಿಸುವುದು ನಮಗೆ ಬೇಕಿದೆ. ಹೀಗಾಗಿ, ಮೀಸಲಾತಿಯ ಮೇಲೆ ಶೇ. 50ರಷ್ಟು ಮಿತಿ ಇರುವುದೂ ನಮಗೆ ಬೇಕಿಲ್ಲ. ಆರೋಗ್ಯ ವಿಮೆ, ನಿರುದ್ಯೋಗ ಭತ್ಯೆ, ಜನರಿಗಾಗಿ 2.5 ಲಕ್ಷ ಸರಕಾರಿ ಉದ್ಯೋಗಗಳ ಭರ್ತಿ ನಮಗೆ ಬೇಕಿದೆ. ನಮ್ಮ ಗುರಿ ಅದಾನಿ. ನಮ್ಮ ಗುರಿ ಮುಂಬೈ ಅನ್ನು ಬದಲಿಸುವುದಾಗಿದೆ” ಎಂದೂ ಹೇಳಿದರು.
"ಏಕ್ ಹೈ ತೊ ಸೇಫ್ ಹೈ" (ಒಗ್ಗಟ್ಟಾಗಿದ್ದರೆ ಸುರಕ್ಷಿತವಾಗಿರುತ್ತೇವೆ) ಎಂಬ ನರೇಂದ್ರ ಮೋದಿ ಘೋಷಣೆ ಕುರಿತು ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಅದು ಅವರ ಸುರಕ್ಷತೆ ಎಂದು ವ್ಯಂಗ್ಯವಾಡಿದರು. ಇದೇ ಸಂದರ್ಭದಲ್ಲಿ ಧಾರಾವಿ ಕೊಳಗೇರಿ ಹಾಗೂ ಗೌತಮ್ ಅದಾನಿ ಮತ್ತು ನರೇಂದ್ರ ಮೋದಿಯ ಚಿತ್ರಗಳನ್ನು ತೆರೆದು ತೋರಿಸಿದ ಅವರು, “ಒಗ್ಗಟ್ಟಾಗಿದ್ದರೆ ಸುರಕ್ಷಿತವಾಗಿರುತ್ತೇವೆ ಎಂದು ಮೋದಿ ಹೇಳುವುದರ ಅರ್ಥ ಇದಾಗಿದೆ” ಎಂದು ಕುಟುಕಿದರು.