ಮೋದಿನಾಮಿಕ್ಸ್ ಭಾರತದ ಆರ್ಥಿಕತೆಗೆ ಶಾಪ : ಮಲ್ಲಿಕಾರ್ಜುನ ಖರ್ಗೆ
ಹೊಸದಿಲ್ಲಿ : ದೇಶದ ಆರ್ಥಿಕ ಸ್ಥಿತಿಯ ಕುರಿತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ರವಿವಾರ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
‘ಮೋದಿನಾಮಿಕ್ಸ್ ಭಾರತದ ಆರ್ಥಿಕತೆಗೆ ಶಾಪವಾಗಿದೆ ’ ಎಂದು ಎಕ್ಸ್ ಪೋಸ್ಟ್‌ನಲ್ಲಿ ಬರೆದುಕೊಂಡಿರುವ ಖರ್ಗೆ, ಕೌಟುಂಬಿಕ ಋಣಭಾರ, ಬೆಲೆಏರಿಕೆ ಮತ್ತು ತಯಾರಿಕೆ ಕ್ಷೇತದ ಸಂಕಷ್ಟಗಳನ್ನು ಪ್ರಸ್ತಾವಿಸಿದ್ದಾರೆ.
ಮೋದಿಯವರ ‘ಮೇಕ್ ಇನ್ ಇಂಡಿಯಾ’ ದಯನೀಯವಾಗಿ ವಿಫಲಗೊಂಡಿದೆ ಎಂದು ಹೇಳಿದ್ದಾರೆ.
‘ಮೋದಿಜಿ, ನಿಮ್ಮ ಅವೇ ಹಳಸಲು ಭಾಷಣಗಳನ್ನು ಪದೇ ಪದೇ ಮಾಡುವುದರಿಂದ ಭಾರತದ ಆರ್ಥಿಕತೆಗೆ ಹಾನಿಯನ್ನುಂಟು ಮಾಡಿರುವ ನಿಮ್ಮ ಸಂಪೂರ್ಣ ವೈಫಲ್ಯಗಳನ್ನು ಮರೆಮಾಚಲು ಸಾಧ್ಯವಿಲ್ಲ’ ಎಂದು ಖರ್ಗೆ ಕುಟುಕಿದ್ದಾರೆ.
2013-14 ಮತ್ತು 2022-23ರ ನಡುವೆ ಕೌಟುಂಬಿಕ ಋಣಭಾರಗಳಲ್ಲಿ ಶೇ.241ರಷ್ಟು ಭಾರೀ ಏರಿಕೆಯಾಗಿದೆ. ಇದು ಜಿಡಿಪಿಯ ಶೇ.40ರಷ್ಟಿದ್ದು ಸಾರ್ವಕಾಲಿಕ ದಾಖಲೆಯಾಗಿದೆ. ಕೌಟುಂಬಿಕ ಉಳಿತಾಯಗಳು 50 ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದಿವೆ ಮತ್ತು ಕೋವಿಡ್ ಸಾಂಕ್ರಾಮಿಕದ ಬಳಿಕ ಭಾರತೀಯ ಕುಟುಂಬಗಳ ವೆಚ್ಚ ಅವುಗಳ ಆದಾಯಕ್ಕಿಂತ ಹೆಚ್ಚಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಸೆಪ್ಟಂಬರ್‌ನಲ್ಲಿ ಮನೆಯಲ್ಲಿ ತಯಾರಿಸಿದ ವೆಜ್ ಥಾಲಿಯ ವೆಚ್ಚ ಶೇ.11ರಷ್ಟು ಏರಿಕೆಯಾಗಿದೆ. ಬಿಜೆಪಿ ಬೆಲೆಏರಿಕೆಯನ್ನು ಹೇರಿದೆ ಮತ್ತು ಅಸಂಘಟಿತ ಕ್ಷೇತ್ರದ ನಾಶ ಈ ಅಧ್ವಾನಕ್ಕೆ ಕಾರಣವಾಗಿದೆ ಎಂದು ಹೇಳಿರುವ ಖರ್ಗೆ,ಯುಪಿಎ ಅವಧಿಯಲ್ಲಿ ಏರಿಕೆಯಾಗಿದ್ದ ಭಾರತದ ರಫ್ತು ಪ್ರಮಾಣ ಮೋದಿಯವರ ನೀತಿಗಳಿಂದಾಗಿ ಕುಸಿದಿದೆ ಎಂದಿದ್ದಾರೆ.