ಸಂಗೀತ ನಿಲ್ಲಿಸಿದ್ದಕ್ಕಾಗಿ ಯುವಕನಿಂದ ಸೋದರನ ಹತ್ಯೆ

Update: 2024-03-10 16:38 GMT

ಸತ್ನಾ: ಕೌಟುಂಬಿಕ ಕಾರ್ಯಕ್ರಮವೊಂದರಲ್ಲಿ ರೆಕಾರ್ಡ್ ಸಂಗೀತವನ್ನು ನಿಲ್ಲಿಸಿದ್ದಕ್ಕಾಗಿ ಹಾಗೂ ನೃತ್ಯ ಮಾಡದಂತೆ ತನ್ನನ್ನು ತಡೆದಿದ್ದರಿಂದ ರೊಚ್ಚಿಗೆದ್ದ ಯುವಕನೊಬ್ಬ ತನ್ನ ಸಹೋದರನನ್ನು ಕೊಡಲಿಯಿಂದ ಕಡಿದು ಕೊಲೆಗೈದ ಬರ್ಬರ ಘಟನೆ ಮಧ್ಯಪ್ರದೇಶದ ಸತ್ನಾ ಜಿಲ್ಲೆಯಲ್ಲಿ ರವಿವಾರ ವರದಿಯಾಗಿದೆ.

ಕೋಠಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು, ಕೊಲೆ ಆರೋಪಿ ರಾಜ್ ಕುಮಾರ್ ಕೋಲ್ (30) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ರಾಜಕುಮಾರ್‌ನ ಸಹೋದರ ರಾಕೇಶ್ (35) ತನ್ನ ಮನೆಯಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದನು. ಈ ಸಂದರ್ಭದಲ್ಲಿ ಸೌಂಡ್ ಸಿಸ್ಟಮ್ ಮೂಲಕ ಸಂಗೀತವನ್ನು ನುಡಿಸಲಾಗುತ್ತಿತ್ತು. ರಾಕೇಶ್, ಸಂಗೀತವನ್ನು ನಿಲ್ಲಿಸಿದಾಗ ಆರೋಪಿಯು ನೃತ್ಯವನ್ನು ಮುಂದುವರಿಸಲು ಬಯಸಿದ್ದನು ಹಾಗೂ ಸಂಗೀತವನ್ನು ನುಡಿಸುವಂತೆ ತನ್ನ ಸಹೋದರನನ್ನು ಒತ್ತಾಯಿಸಿದ್ದನು.

ಈ ವಿಷಯವಾಗಿ ಸಹೋದರರ ನಡುವೆ ಭಾರೀ ವಾಗ್ವಾದ ಏರ್ಪಟ್ಟಿತ್ತು. ರೋಷದ ಭರದಲ್ಲಿ ರಾಜಕುಮಾರ್, ಸೋದರ ರಾಕೇಶ್ ಮೇಲೆ ಕೊಡಲಿಯಿಂದ ದಾಳಿ ನಡೆಸಿ, ಆತನನ್ನು ಹತ್ಯೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆನಂತರ ಆರೋಪಿಯು ಘಟನಾ ಸ್ಥಳದಿಂದ ಪರಾರಿಯಾಗಿದ್ದನು. ಪೊಲೀಸರು ಆನಂತರ ಶೋಧ ಕಾರ್ಯ ನಡೆಸಿ, ಕಿರುಸೇತುವೆಯೊಂದರ ಸಮೀಪ ಅವಿತಿದ್ದ ಆತನನ್ನು ಬಂಧಿಸಿದ್ದರು.

ಆರೋಪಿಯನ್ನು ಬಂಧಿಸಲಾಗಿದ್ದು, ಅಪರಾಧಕ್ಕೆ ಆತ ಬಳಸಿದ್ದ ಶಸ್ತ್ರಾಸ್ತ್ರವನ್ನು ವಶಪಡಿಸಿಕೊಳ್ಳಲಾಗಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News