ಮಹಿಳೆಯೊಬ್ಬರ ಜೀವ ಉಳಿಸಲು ಮಹಾರಾಷ್ಟ್ರದಿಂದ ಮಧ್ಯಪ್ರದೇಶಕ್ಕೆ ಪ್ರಯಾಣಿಸಿದ ʼಬಾಂಬೆ ರಕ್ತದ ಗುಂಪುʼ ಹೊಂದಿದ್ದ ವ್ಯಕ್ತಿ!
ಇಂದೋರ್: ಗಂಭೀರವಾಗಿ ಅಸ್ವಸ್ಥಗೊಂಡಿದ್ದ ಮಧ್ಯಪ್ರದೇಶದ 30 ವರ್ಷದ ಮಹಿಳೆಯೊಬ್ಬರ ಜೀವ ಉಳಿಸಲು ವಿರಳ ಬಾಂಬೆ ರಕ್ತದ ಗುಂಪು ಹೊಂದಿದ್ದ, ವೃತ್ತಿಯಲ್ಲಿ ಹೂ ವ್ಯಾಪಾರಿಯಾದ ವ್ಯಕ್ತಿಯೊಬ್ಬರು ಮಹಾರಾಷ್ಟ್ರದ ಶಿರಡಿಯಿಂದ ಮಧ್ಯೆಪ್ರದೇಶಕ್ಕೆ 400 ಕಿ.ಮೀ. ಕಾರಿನಲ್ಲಿ ಪ್ರಯಾಣಿಸಿರುವ ಘಟನೆ ವರದಿಯಾಗಿದೆ.
ಶಿರಡಿಯಲ್ಲಿ ಹೂವಿನ ಸಗಟು ವ್ಯಾಪಾರಿಯಾಗಿರುವ 36 ವರ್ಷದ ರವೀಂದ್ರ ಅಷ್ಟೇಕರ್ ಎಂಬುವವರು ಮೇ 25ರಂದು ಮಧ್ಯಪ್ರದೇಶದ ಇಂದೋರ್ ಗೆ ಕಾರಿನಲ್ಲಿ ತೆರಳಿ , ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಗೆ ರಕ್ತದಾನ ಮಾಡಿದ್ದಾರೆ. ಇದರ ಬೆನ್ನಿಗೇ ಆಕೆಯ ಆರೋಗ್ಯ ಸುಧಾರಿಸಿದೆ ಎಂದು ಹೇಳಲಾಗಿದೆ.
ಈ ಕುರಿತು ಮಂಗಳವಾರ PTI ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ರವೀಂದ್ರ ಅಷ್ಟೇಕರ್, “ವಾಟ್ಸ್ ಆ್ಯಪ್ ರಕ್ತ ದಾನಿಗಳ ಗುಂಪಿನಿಂದ ಮಹಿಳೆಯ ಸ್ಥಿತಿ ಗಂಭೀರವಾಗಿರುವ ಸಂಗತಿ ನನಗೆ ತಿಳಿಯಿತು. ನಾನು ನನ್ನ ಗೆಳೆಯನ ಕಾರಿನಲ್ಲಿ ಇಂದೋರ್ ಗೆ 400 ಕಿಮೀ ಪ್ರಯಾಣ ಬೆಳೆಸಿದೆ. ನಾನು ಆ ಮಹಿಳೆಯ ಜೀವ ಉಳಿಸಲು ಒಂದಿಷ್ಟು ಕೊಡುಗೆ ನೀಡಿರುವುದರಿಂದ ಖಂಡಿತ ನನಗೆ ಸಂತೋಷವಾಗಿದೆ” ಎಂದು ಹೇಳಿದ್ದಾರೆ.
ನಾನು ಕಳೆದ 10 ವರ್ಷಗಳಿಂದ ಅಗತ್ಯವಿದ್ದ ಎಂಟು ರೋಗಿಗಳಿಗೆ ನನ್ನ ತವರು ರಾಜ್ಯವಾದ ಮಹಾರಾಷ್ಟ್ರದಲ್ಲಿ ಹಾಗೂ ಗುಜರಾತ್, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ವಿವಿಧ ನಗರಗಳಲ್ಲಿ ರಕ್ತದಾನ ಮಾಡಿದ್ದೇನೆ ಎಂದೂ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಸರಕಾರಿ ಮಹಾರಾಜ ಯಶವಂತನ್ ರಾವ್ ಆಸ್ಪತ್ರೆಯ ರಕ್ತಪೂರಣ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ. ಅಶೋಕ್ ಯಾದವ್, ಮತ್ತೊಂದು ಆಸ್ಪತ್ರೆಯಲ್ಲಿ ಪ್ರಸೂತಿ ಶಸ್ತ್ರಕ್ರಿಯೆಯ ಸಂದರ್ಭದಲ್ಲಿ ಮಹಿಳೆಗೆ ಆಕಸ್ಮಿಕವಾಗಿ ʼಒ ಪಾಸಿಟಿವ್ʼ ರಕ್ತವನ್ನು ಪೂರಣ ಮಾಡಲಾಗಿತ್ತು. ಇದರಿಂದ ಆಕೆಯ ಪರಿಸ್ಥಿತಿ ವಿಷಮಿಸಿ, ಮೂತ್ರಪಿಂಡಗಳಿಗೂ ಹಾನಿಯಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.
1952ರಲ್ಲಿ ಪತ್ತೆ ಹಚ್ಚಲಾದ ಬಾಂಬೆ ರಕ್ತದ ಗುಂಪು ವಿರಳ ರಕ್ತದ ಗುಂಪಾಗಿದ್ದು, ಈ ಗುಂಪಿನಲ್ಲಿ ಎಚ್ ಪ್ರತಿಜನಕದ ಬದಲು ಎಚ್ ಪ್ರತಿಕಾಯಗಳ ಅಸ್ತಿತ್ವವಿರುತ್ತದೆ. ಈ ರಕ್ತದ ಗುಂಪು ಹೊಂದಿರುವವರು ಕೇವಲ ಇದೇ ಗುಂಪಿನ ರಕ್ತವನ್ನು ಹೊಂದಿರುವವರಿಂದ ಮಾತ್ರ ರಕ್ತವನ್ನು ಪಡೆಯಬಹುದಾಗಿದೆ.