"ದಯವಿಟ್ಟು ಜಾಗ ಖಾಲಿ ಮಾಡಿ": ರಾಮ ಮಂದಿರ ಕುರಿತ ಪೋಸ್ಟ್ ಬಳಿಕ‌ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಮತ್ತು ಪುತ್ರಿಗೆ ನೋಟಿಸ್

Update: 2024-01-31 11:36 GMT

ಮಣಿಶಂಕರ್ ಅಯ್ಯರ್‌ / ಸುರಣ್ಯಾ ಅಯ್ಯರ್ (Photo credit: indiatoday.in)

ಹೊಸದಿಲ್ಲಿ: ಅಯೋಧ್ಯೆಯಲ್ಲಿ ಜ.22ರಂದು ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಸಮಾರಂಭವನ್ನು ಖಂಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಮತ್ತು ಅವರ ಪುತ್ರಿ ಸುರಣ್ಯಾ ಅಯ್ಯರ್ ಅವರು ದಿಲ್ಲಿಯ ಜಂಗ್‌ಪುರದಲ್ಲಿಯ ತಮ್ಮ ಮನೆಯನ್ನು ತೆರವುಗೊಳಿಸುವಂತೆ ನೋಟಿಸನ್ನು ಸ್ವೀಕರಿಸಿದ್ದಾರೆ. ಅಲ್ಲಿಯ ನಿವಾಸಿಗಳ ಕಲ್ಯಾಣ ಸಂಘ (ಆರ್‌ಡಬ್ಲ್ಯುಎ)ವು ಹೊರಡಿಸಿರುವ ನೋಟಿಸ್‌ನಲ್ಲಿ, ಕಾಲನಿಯಲ್ಲಿ ಶಾಂತಿಯನ್ನು ಕದಡುವಂತಹ ಮತ್ತು ಇತರ ನಿವಾಸಿಗಳ ಧಾರ್ಮಿಕ ಭಾವನೆಗಳಿಗೆ ನೋವನ್ನುಂಟು ಮಾಡುವಂತಹ ಆಟಾಟೋಪಗಳಲ್ಲಿ ತೊಡಗಿಕೊಳ್ಳದಂತೆ ಅಯ್ಯರ್‌ಗಳನ್ನು ಆಗ್ರಹಿಸಲಾಗಿದೆ.

‘ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆಯನ್ನು ವಿರೋಧಿಸುವ ಮೂಲಕ ನಾವು ಅಂತಹುದೇನನ್ನು ಮಾಡಿದ್ದೇವೆ’ಎಂದು ನೀವು ಭಾವಿಸುತ್ತಿದ್ದರೆ ದಯವಿಟ್ಟು ಇಲ್ಲಿಯ ಮನೆಯನ್ನು ಖಾಲಿ ಮಾಡಿ ಇಂತಹ ದ್ವೇಷ ಭಾವನೆಗಳಿಗೆ ಕುರುಡಾಗುವ ಜನರಿರುವ ಇನ್ನೊಂದು ಕಾಲೋನಿಗೆ ತೆರಳಿ ಎಂದು ನಿಮಗೆ ಸೂಚಿಸುತ್ತಿದ್ದೇವೆ ಎಂದೂ ನೋಟಿಸ್‌ನಲ್ಲಿ ಹೇಳಲಾಗಿದೆ.

ಸುರಣ್ಯಾ ಅಯ್ಯರ್ ತನ್ನ ಜ.20ರ ಫೇಸ್‌ಬುಕ್ ಪೋಸ್ಟ್‌ನಲ್ಲಿ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆಯನ್ನು ಪ್ರತಿಭಟಿಸಿ ತಾನು ಉಪವಾಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದರು. ತನ್ನ ಉಪವಾಸವು ಸಹ ಮುಸ್ಲಿಮ್ ಪ್ರಜೆಗಳಿಗೆ ಪ್ರೀತಿ ಮತ್ತು ದುಃಖದ ಅಭಿವ್ಯಕ್ತಿಯಾಗಿದೆ ಎಂದೂ ಬರೆದಿದ್ದರು.

ಸುರಣ್ಯಾ ಅಯ್ಯರ್ ಅವರು ಸಾಮಾಜಿಕ ಮಾಧ್ಯಮದ ಮೂಲಕ ನೀಡಿರುವ ಹೇಳಿಕೆಯು ಸುಶಿಕ್ಷಿತ ವ್ಯಕ್ತಿಗೆ ಶೋಭೆಯನ್ನು ತರುವುದಿಲ್ಲ. 500 ವರ್ಷಗಳ ಬಳಿಕ,ಅದೂ 5-0 ಬಹುಮತದ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಬಳಿಕ ರಾಮ ಮಂದಿರವನ್ನು ನಿರ್ಮಿಸಲಾಗುತ್ತಿದೆ ಎನ್ನುವುದನ್ನು ಅವರು ತಿಳಿದುಕೊಳ್ಳಬೇಕಿತ್ತು ಎಂದು ನೋಟಿಸ್‌ನಲ್ಲಿ ಹೇಳಿರುವ ಆರ್‌ಡಬ್ಲ್ಯುಎ,‘ನೀವು ವಾಕ್ ಸ್ವಾತಂತ್ರ್ಯದ ರಕ್ಷಣೆಯನ್ನು ಪಡೆದುಕೊಳ್ಳಬಹುದು. ಆದರೆ ದಯವಿಟ್ಟು ನೆನಪಿಡಿ, ಸರ್ವೋಚ್ಚ ನ್ಯಾಯಾಲಯದ ಪ್ರಕಾರ ವಾಕ್ ಸ್ವಾತಂತ್ರ್ಯವು ಪರಿಪೂರ್ಣವಲ್ಲ’ ಎಂದು ತಿಳಿಸಿದೆ.

ತನ್ನ ಪುತ್ರಿಯ ಸಾಮಾಜಿಕ ಮಾಧ್ಯಮ ಪೋಸ್ಟ್‌ನ್ನು ಖಂಡಿಸುವಂತೆ ಇಲ್ಲವೇ ಮನೆಯನ್ನು ಖಾಲಿ ಮಾಡಿ ಹೊರಡುವಂತೆ ಅಯ್ಯರ್ ಅವರನ್ನು ಆಗ್ರಹಿಸಲಾಗಿದೆ.

ಜನರನ್ನು ಪ್ರಚೋದಿಸಬೇಡಿ ಮತ್ತು ಅವರಲ್ಲಿ ದ್ವೇಷ ಮತ್ತು ಅಪನಂಬಿಕೆಯನ್ನು ಸೃಷ್ಟಿಸಬೇಡಿ ಎಂದು ಅಯ್ಯರ್‌ ಅವರನ್ನು ಆಗ್ರಹಿಸಿರುವ ಆರ್‌ಡಬ್ಲ್ಯುಎ, ‘ನಿಮ್ಮ ದೇಶದ ಒಳಿತಿಗಾಗಿ ನೀವು ರಾಜಕೀಯದಲ್ಲಿ ಏನು ಬೇಕಾದರೂ ಮಾಡಬಹುದು. ಆದರೆ ನೆನಪಿಡಿ,ನಿಮ್ಮ ಹೇಳಿಕೆಗಳು ಮತ್ತು ನಿಮ್ಮ ಕೃತ್ಯಗಳು ಈ ಕಾಲನಿಗೆ ಒಳ್ಳೆಯ ಅಥವಾ ಕೆಟ್ಟ ಹೆಸರನ್ನು ತರುತ್ತವೆ. ಆದ್ದರಿಂದ ಇಂತಹ ಪೋಸ್ಟ್‌ಗಳು/ಹೇಳಿಕೆಗಳಿಂದ ದೂರವಿರುವಂತೆ ನಾವು ನಿಮ್ಮನ್ನು ಕೋರಿಕೊಳ್ಳುತ್ತಿದೇವೆ’ ಎಂದು ತಿಳಿಸಿದೆ. 

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News