ಮಣಿಪುರ: ಐಜಿಪಿ ಕಾರು ತಡೆದು ಬೆಂಕಿ ಹಚ್ಚಿದ ಗುಂಪು
ಗುವಾಹತಿ: ಮಣಿಪುರ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ತಮ್ಮ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ಮಹಿಳೆಯರು, ಐಜಿಪಿ (ನರೋಟಿಕ್ಸ್, ಗಡಿ ವ್ಯವಹಾರ ಮತ್ತು ವಲಯ-2) ಪ್ರಯಾಣಿಸುತ್ತಿದ್ದ ಕಾರನ್ನು ಹಾಗೂ ಅವರ ಬೆಂಗಾವಲು ವಾಹನವನ್ನು ತಡೆದು ಬೆಂಕಿ ಹಚ್ಚಿ ಸುಟ್ಟ ಘಟನೆ ವರದಿಯಾಗಿದೆ.
ಪ್ರತಿಭಟನಾಕಾರರು ಕಾರನ್ನು ತಡೆಯುತ್ತಿದ್ದಂತೆ ವಾಹನದಿಂದ ಐಜಿಪಿ ಇಳಿದ ಕಾರಣ, ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ. ಏತನ್ಮಧ್ಯೆ ಇನ್ನೊಂದು ಘಟನೆಯಲ್ಲಿ ಅಪರಿಚಿತರ ಗುಂಪು ಭದ್ರತಾ ಸಿಬ್ಬಂದಿಯ ಮೇಲೆ ಗುಂಡು ಹಾರಿಸಿ ಗಾಯಗೊಳಿಸಿದೆ. ಎರಡು ಮನೆಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ.
ಐಜಿಪಿ ವಾಹನ ಹಾಗೂ ಅವರ ಭದ್ರತಾ ಸಿಬ್ಬಂದಿಯ ಮೇಳೆ ದಾಳಿ ನಡೆದ ಬೆನ್ನಲ್ಲೇ, ಅಧಿಕಾರಿಗಳು 30 ಮಂದಿಯನ್ನು ಬಂಧಿಸಿ, ಈ ಪ್ರದೇಶದಲ್ಲಿ ಕಫ್ರ್ಯೂ ಜಾರಿಗೊಳಿಸಿದ್ದಾರೆ.
ಮುಖ್ಯಮಂತ್ರಿಯನ್ನು ಭೇಟಿ ಮಾಡಲು ಅವಕಾಶ ನಿರಾಕರಿಸಿದ ಹಿನ್ನೆಲೆಯಲ್ಲಿ ಬಹುತೇಕ ಮಹಿಳೆಯರೇ ಇದ್ದ ಪ್ರತಿಭಟನಾಕಾರರು ಹಿಂಸಾಚಾರಕ್ಕೆ ಇಳಿದರು ಎನ್ನಲಾಗಿದೆ. ಈ ಗುಂಪನ್ನು ಚದುರಿಸಲು ಭದ್ರತಾ ಪಡೆಗಳು ಅಶ್ರುವಾಯು ಪ್ರಯೋಗ ಮಾಡಿದ್ದು, ಈ ವೇಳೆ ಕನಿಷ್ಠ 20 ಮಂದಿ ಗಾಯಗೊಂಡಿದ್ದಾರೆ. ಕ್ಷಿಪ್ರ ಕಾರ್ಯಾಚರಣೆ ಪಡೆಗೆ ಸೇರಿದ ಎರಡು ವಾಹನಗಳನ್ನೂ ಪ್ರತಿಭಟನಾಕಾರರು ಧ್ವಂಸಗೊಳಿಸಿದ್ದಾರೆ.
ಯಾವುದೇ ಸಮಾಜ ವಿರೋಧಿ ಕೃತ್ಯಗಳಲ್ಲಿ ತೊಡಗದಂತೆ ಮತ್ತು ಭದ್ರತಾ ಪಡೆಗಳ ಚಲನೆಗೆ ಅಡ್ಡಿಪಡಿಸದಂತೆ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿಕೊಂಡಿದ್ದಾರೆ. ಇದನ್ನು ಉಲ್ಲಂಘಿಸಿದಲ್ಲಿ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.