ಮಣಿಪುರ: ಸಚಿವರ ನಿವಾಸದ ಸಮೀಪ ಸ್ಫೋಟ; ಇಬ್ಬರಿಗೆ ಗಾಯ
ಇಂಪಾಲ: ಮಣಿಪುರ ಸಚಿವ ಖೇಮ್ಚಂದ್ ಯುಮ್ನಾನ್ ಅವರ ಇಂಫಾಲ ಪಶ್ಚಿಮ ಜಿಲ್ಲೆಯಲ್ಲಿರುವ ನಿವಾಸದ ಸಮೀಪ ಸಂಭವಿಸಿದ ಹ್ಯಾಂಡ್ ಗ್ರೆನೇಡ್ ಸ್ಫೋಟದಿಂದ ಸಿಆರ್ ಪಿ ಎಫ್ ಸಿಬ್ಬಂದಿ ಸೇರಿದಂತೆ ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ.
ಈ ಘಟನೆ ಯುಮ್ನಾನ್ ಲೈಕೈನಲ್ಲಿ ಶನಿವಾರ ಸುಮಾರು ರಾತ್ರಿ 10 ಗಂಟೆಗೆ ಸಂಭವಿಸಿದೆ. ಮೋಟಾರು ಸೈಕಲ್ನಲ್ಲಿ ಆಗಮಿಸಿದ ಇಬ್ಬರು ವ್ಯಕ್ತಿಗಳು ಗ್ರೆನೇಡ್ ಎಸೆದರು. ಅದು ಸಚಿವರ ನಿವಾಸದ ಮುಖ್ಯ ಗೇಟ್ನಿಂದ ಕೆಲವು ಮೀಟರ್ ದೂರ ಬಿತ್ತು ಎಂದು ಅವರು ಹೇಳಿದ್ದಾರೆ. ಘಟನೆಯಲ್ಲಿ ಸಿಆರ್ ಪಿ ಎಫ್ ಸಿಬ್ಬಂದಿ ಹಾಗೂ ಪಶ್ಚಿಮಬಂಗಾಳದ ನಿವಾಸಿಯಾಗಿರುವ ದಿನೇಶ್ ಚಂದ್ರ ದಾಸ್ ಅವರ ಕೈಗಳಿಗೆ ಸ್ಪ್ಲಿಂಟರ್ನಿಂದ ಗಾಯಗಳಾಗಿವೆ. ಇನ್ನೋರ್ವ ಮಹಿಳೆಯ ಕಾಲಿಗೂ ಸ್ಪ್ಲಿಂಟರ್ನಿಂದ ಗಾಯಗಳಾಗಿವೆ. ಯುಮ್ನಾನ್ ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ನ ಸಚಿವರಾಗಿದ್ದಾರೆ. ಸ್ಫೋಟ ಸಂಭವಿಸಿದ ಸ್ಥಳಕ್ಕೆ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರು ಭೇಟಿ ನೀಡಿದ್ದಾರೆ ಹಾಗೂ ದಾಳಿಯನ್ನು ಖಂಡಿಸಿದ್ದಾರೆ.