ಮಣಿಪುರ: ಅಪಹೃತ ಕುಕಿಗಳ ಪೈಕಿ ಇಬ್ಬರ ಶವ ಪತ್ತೆ

Update: 2023-11-09 13:43 GMT

ಸಾಂದರ್ಭಿಕ ಚಿತ್ರ Photo- PTI

ಇಂಫಾಲ: ಮಣಿಪುರದ ಕಾಂಗ್‌ಪೊಕ್ಪಿ ಜಿಲ್ಲೆಯ ಭದ್ರತಾ ತಪಾಸಣಾ ಠಾಣೆಯೊಂದರಿಂದ ಮೆತೈ ಗುಂಪೊಂದು ಅಪಹರಿಸಿದೆ ಎನ್ನಲಾದ ಕುಕಿ ಸಮುದಾಯಕ್ಕೆ ಸೇರಿದ ಸೈನಿಕರೊಬ್ಬರ ಕುಟುಂಬದ ನಾಲ್ವರ ಪೈಕಿ ಇಬ್ಬರ ಶವಗಳು ಪತ್ತೆಯಾಗಿವೆ.

ಮಂಗಳವಾರ ಬೆಳಗ್ಗೆ, ಕಾಂಗ್‌ಚುಪ್ ಚಿಂಗ್‌ಖೋಂಗ್ ಗ್ರಾಮದ ತಪಾಸಣಾ ಠಾಣೆಯೊಂದರ ಸಮೀಪ ಮೆತೈ ಸಮುದಾಯದ ಗುಂಪೊಂದು ಪೊಲೀಸರು ಮತ್ತು ಭದ್ರತಾ ಪಡೆಗಳ ಸಮ್ಮುಖದಲ್ಲೇ ಇಬ್ಬರು ಮಹಿಳೆಯರು ಸೇರಿದಂತೆ ಐವರು ಕುಕಿ ಸಮುದಾಯದ ಸದಸ್ಯರನ್ನು ಅಪಹರಿಸಿತ್ತು. ಅವರು ಮದುವೆ ಸಮಾರಂಭವೊಂದರಲ್ಲಿ ಭಾಗವಹಿಸುವುದಕ್ಕಾಗಿ ಎಲ್. ಫೈಜಂಗ್ ಗ್ರಾಮಕ್ಕೆ ಪ್ರಯಾಣಿಸುತ್ತಿದ್ದರು.

ಮಣಿಪುರದಲ್ಲಿ ಕುಕಿ ಮತ್ತು ಮೆತೈ ಸಮುದಾಯಗಳ ನಡುವೆ ಮೇ ತಿಂಗಳಿನಿಂದ ಸಂಘರ್ಷ ನಡೆಯುತ್ತಿದೆ. 200ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. 60,000ಕ್ಕೂ ಅಧಿಕ ಜನರು ತಮ್ಮ ಮನೆಗಳನ್ನು ತೊರೆದಿದ್ದಾರೆ.

ಅಪಹರಣಕ್ಕೊಳಗಾದವರ ಪೈಕಿ ಓರ್ವ ಪುರುಷ ಮತ್ತು ಓರ್ವ ಮಹಿಳೆಯ ಶವಗಳು ಮಂಗಳವಾರ ಸಂಜೆ ಪತ್ತೆಯಾಗಿವೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ತೆಮ್‌ತಿಂಗ್ ನಗಸಂಗ್ವ ‘ಸ್ಕ್ರಾಲ್’ಗೆ ತಿಳಿಸಿದ್ದಾರೆ. ಇತರ ಇಬ್ಬರು ನಾಪತ್ತೆಯಾಗಿದ್ದಾರೆ.

ಅಪಹರಣಕ್ಕೊಳಗಾದ ಗುಂಪಿನ ಐದನೇ ಸದಸ್ಯ ಹಾಗೂ ಭಾರತೀಯ ಸೇನೆಯ ಸೈನಿಕರೊಬ್ಬರ 65 ವರ್ಷದ ತಂದೆಯನ್ನು ಭದ್ರತಾ ಪಡೆಗಳು ಮಂಗಳವಾರ ರಕ್ಷಿಸಿದೆ. ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಬುಧವಾರ ಗುವಾಹಟಿಯಲ್ಲಿರುವ ಸೇನಾ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News