ಮಣಿಪುರ: ಸೈನಿಕನ ಸಂಬಂಧಿ ಸೇರಿದಂತೆ ನಾಲ್ವರ ಅಪಹರಣ
ಇಂಫಾಲ: ಜನಾಂಗೀಯ ಸಂಘರ್ಷದಿಂದ ಬೂದಿಮುಚ್ಚಿದ ಕೆಂಡದಂತಿದ್ದ ಮಣಿಪುರದಲ್ಲಿ ಮತ್ತೆ ಹಿಂಸಾಕೃತ್ಯಗಳು ಭುಗಿಲೆದ್ದಿದ್ದು, ಮೀಟಿ ಸಮುದಾಯಕ್ಕೆ ಸೇರಿದ ಸಂಘಟನೆಗಳು ಸೈನಿಕರ ಸಂಬಂಧಿಯೊಬ್ಬರ ಸಹಿತ ನಾಲ್ಕು ಮಂದಿಯನ್ನು ಇಂಫಾಲ ಪಶ್ಚಿಮ ಜಿಲ್ಲೆಯಿಂದ ಮಂಗಳವಾರ ಅಪಹರಿಸಿದ್ದಾರೆ ಎಂದು ಆಪಾದಿಸಲಾಗಿದೆ.
ಈ ಅಪಹರಣದ ಸುದ್ದಿ ಹರಡುತ್ತಿದ್ದಂತೆಯೇ ಕುಕಿ ಉಗ್ರರು ಇಂಫಾಲ ಪಶ್ಚಿಮ ಜಿಲ್ಲೆಯ ಕಂಗ್ಚುಪ್ ಪ್ರದೇಶದಲ್ಲಿ ಮತ್ತು ಕಂಗ್ಪೋಕ್ಪಿ ಜಿಲ್ಲೆಗಳಲ್ಲಿ ಗುಂಪುಗಳತ್ತ ಗುಂಡು ಹಾರಿಸಿದ್ದಾರೆ. ಈ ಘಟನೆಯಲ್ಲಿ ಇಬ್ಬರು ಪೊಲೀಸರು ಮತ್ತು ಮಹಿಳೆ ಸೇರಿದಂತೆ ಏಳು ಮಂದಿ ಗಾಯಗೊಂಡಿದ್ದಾರೆ.
ಇದಕ್ಕೂ ಮುನ್ನ ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರ ಜತೆ ಪ್ರಯಾಣಿಸುತ್ತಿದ್ದ 65 ವರ್ಷದ ವ್ಯಕ್ತಿಯೊಬ್ಬರನ್ನು ಉಗ್ರರು ಅಪಹರಿಸಿದ್ದರು. ಈ ಪೈಕಿ ಒಬ್ಬರನ್ನು ಭದ್ರತಾ ಪಡೆ ಯೋಧರು ರಕ್ಷಿಸಿದರು. ಮಂಗಳವಾರ ತಡರಾತ್ರಿವರೆಗೂ ನಾಲ್ಕು ಮಂದಿ ಅಪಹೃತರ ಸುಳಿವು ಪತ್ತೆಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
"ಕುಕಿ ಪ್ರಾಬಲ್ಯದ ಚುರಚಂದಾಪುರದಿಂದ ಕಂಗ್ಪೋಕ್ಪಿಗೆ ಪ್ರಯಾಣಿಸುತ್ತಿದ್ದ ಐದು ಮಂದಿ ಕುಕಿ ಜನರನ್ನು ಮೀಟಿ ಉಗ್ರರ ಗುಂಪು ಅಪಹರಿಸಿತ್ತು. ಈ ಪೈಕಿ ಒಬ್ಬರನ್ನು ಪೊಲೀಸರು ರಕ್ಷಿಸಿದ್ದಾರೆ. ವೃದ್ಧ ವ್ಯಕ್ತಿಗೆ ಗಾಯಗಳಾಗಿದ್ದು, ಇತರ ನಾಲ್ವರ ಪತ್ತೆಯಾಗಿಲ್ಲ" ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.