ಮಣಿಪುರದಲ್ಲಿ ಶಸ್ತ್ರಾಸ್ತ್ರ ಲೂಟಿಗೆ ಯತ್ನ: ಪೊಲೀಸ್ ಗುಂಡಿಗೆ ಒಬ್ಬ ಬಲಿ
ಗುವಾಹತಿ: ಭಾರತೀಯ ಮೀಸಲು ಪಡೆಯ (IRB) ಮೂರನೇ ಶಸ್ತ್ರಾಗಾರದ ಮೇಲೆ ದಾಳಿ ನಡೆಸಿ ಶಸ್ತ್ರಾಸ್ತ್ರ ಲೂಟಿಗೆ ಯತ್ನಿಸಿದ ಗುಂಪಿನ ಮೇಲೆ ಮಣಿಪುರ ಪೊಲೀಸರು ಗುಂಡಿನ ದಾಳಿ ನಡೆಸಿದಾಗ ಒಬ್ಬ ಮೃತಪಟ್ಟ ಘಟನೆ ತೌಬಾಲ್ ಜಿಲ್ಲೆಯಲ್ಲಿ ಮಂಗಳವಾರ ನಡೆದಿರುವ ಬಗ್ಗೆ ವರದಿಯಾಗಿದೆ.
ಕುಕಿ ಜನಾಂಗದ ವಕ್ತಾರರ ಚುರಾಚಂದಪುರ ನಿವಾಸವನ್ನು ವಿರೋಧಿ ಗುಂಪಿನವರು ಸುಟ್ಟುಹಾಕಿದ ಕೆಲವೇ ಗಂಟೆಗಳಲ್ಲಿ ಈ ಕೃತ್ಯ ನಡೆದಿದೆ. ಎರಡೂ ಗುಂಪುಗಳು ಕದನ ವಿರಾಮ ಘೋಷಿಸಿದ್ದರೂ, ಕುಕಿ ಬಣ ಕಳೆದ ರವಿವಾರ ರಾಷ್ಟ್ರೀಯ ಹೆದ್ದಾರಿ ತಡೆಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ.
ಇಂಫಾಲದಿಂದ ಸುಮಾರು 30 ಕಿಲೋಮೀಟರ್ ದೂರದ ವಂಗ್ ಬಾಲ್ IRB ಶಿಬಿರದ ಮೇಲೆ ಒಂದು ಗುಂಪು ದಾಳಿ ನಡೆಸಿ, ಭದ್ರತಾ ಸಿಬ್ಬಂದಿಯ ಮೇಲೆ ಕಲ್ಲು ತೂರಾಟ ನಡೆಸಿದರು. ಈ ಹಂತದಲ್ಲಿ ಪೊಲೀಸರು ಮೊದಲು ಅಶ್ರುವಾಯು ಪ್ರಯೋಗ ನಡೆಸಿದರು ಹಾಗೂ ಆ ಬಳಿಕ ಗುಂಡು ಹಾರಿಸಿದರು ಎಂದು ಮೂಲಗಳು ಹೇಳಿವೆ.
ಪೊಲೀಸ್ ಗುಂಡಿಗೆ 27 ವರ್ಷದ ಯುವಕ ಜೀವ ಕಳೆದುಕೊಂಡಿದ್ದಾನೆ. ಘಟನೆಯಿಂದ ಉದ್ರಿಕ್ತರಾದ ಗುಂಪು ತಕ್ಷಣ ಇಂಫಾಲ- ಮೊರೆಹ್ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿತು. ಈ ಮೂಲಕ ಅಸ್ಸಾಂ ರೈಫಲ್ಸ್ ಹಾಗೂ ಇತರ ಭದ್ರತಾ ಪಡೆಗಳು ಈ ಪ್ರದೇಶಕ್ಕೆ ಭೇಟಿ ನೀಡದಂತೆ ತಡೆಯಿತು. ಘಟನೆ ಬೆನ್ನಲ್ಲೇ ಜಿಲ್ಲಾಡಳಿತ ಕಫ್ರ್ಯೂ ಸಡಿಲಿಕೆ ಕ್ರಮವನ್ನು ಹಿಂಪಡೆದಿದೆ ಎಂದು ತಿಳಿದು ಬಂದಿದೆ.
ಬಿಷ್ಣುಪುರ- ಚುರಾಚಂದಪುರ ಗಡಿಯಲ್ಲಿ ಕಳೆದ ವಾರಾಂತ್ಯದಲ್ಲಿ ಗ್ರಾಮಸ್ವಯಂಸೇವಕರ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ನಾಲ್ಕು ಮಂದಿ ಮೃತಪಟ್ಟ ಹಿನ್ನೆಲೆಯಲ್ಲಿ ಪ್ರತೀಕಾರವಾಗಿ ಈ ಐಆರ್‍ಪಿ ಶಸ್ತ್ರಾಗಾರ ದಾಳಿ ನಡೆದಿದೆ ಎಂದು ಹೇಳಲಾಗುತ್ತಿದೆ.