ಶಾಂತಿ ಒಪ್ಪಂದಕ್ಕೆ ಸಹಿ ಮಾಡಿದ ಮಣಿಪುರದ ಬಂಡುಕೋರ ಗುಂಪು ʼಯುಎನ್ಎಲ್ಎಫ್ʼ: ಚಾರಿತ್ರಿಕ ಮೈಲಿಗಲ್ಲು ಎಂದು ಬಣ್ಣಿಸಿದ ಅಮಿತ್ ಶಾ

Update: 2023-11-29 13:51 GMT

Photo: @AmitShah \ X

ಹೊಸ ದಿಲ್ಲಿ: ಮಣಿಪುರದ ಬಂಡುಕೋರ ಗುಂಪಾದ ಯುನೈಟೆಡ್ ನ್ಯಾಷನಲ್ ಲಿಬರೇಷನ್ ಫ್ರಂಟ್ (ಯುಎನ್ಎಲ್ಎಫ್) ಕೇಂದ್ರ ಸರ್ಕಾರದೊಂದಿಗೆ ಶಾಂತಿ ಒಪ್ಪಂದಕ್ಕೆ ಸಹಿ ಮಾಡಿದೆ ಎಂದು ಬುಧವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ ಎಂದು indiatoday.in ವರದಿ ಮಾಡಿದೆ.

ಶಾಂತಿ ಒಪ್ಪಂದವನ್ನು ಪ್ರಕಟಿಸಿರುವ ಅಮಿತ್ ಶಾ, “ಮಣಿಪುರದ ಕಣಿವೆ ಮೂಲದ ಪುರಾತನ ಶಸ್ತ್ರಾಸ್ತ್ರಸಹಿತ ಸಂಘಟನೆಯಾದ ಯುಎನ್ಎಲ್ಎಫ್ ಹಿಂಸಾಚಾರವನ್ನು ತ್ಯಜಿಸಿ, ಮುಖ್ಯವಾಹಿನಿಗೆ ಸೇರ್ಪಡೆಯಾಗಲು ಸಮ್ಮತಿ ವ್ಯಕ್ತಪಡಿಸಿದೆ. ನಾನು ಅವರನ್ನು ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳಿಗೆ ಸ್ವಾಗತಿಸುತ್ತೇನೆ ಹಾಗೂ ಶಾಂತಿ ಮತ್ತು ಪ್ರಗತಿಯ ಹಾದಿಯಲ್ಲಿನ ಅವರ ಪಯಣಕ್ಕೆ ಶುಭ ಕೋರುತ್ತೇನೆ” ಎಂದು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ಯುಎನ್ಎಲ್ಎಫ್ ಗುಂಪು ಶಾಂತಿ ಒಪ್ಪಂದಕ್ಕೆ ಸಹಿ ಮಾಡಿದ ನಂತರ, ಯುಎನ್ಎಲ್ಎಫ್ ಸದಸ್ಯರು ಶಸ್ತಾಸ್ತ್ರಗಳನ್ನು ಶರಣಾಗಿಸುತ್ತಿರುವ ವಿಡಿಯೊವೊಂದನ್ನೂ ಅವರು ಹಂಚಿಕೊಂಡಿದ್ದಾರೆ.

ನಂತರ, ANI ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಯುಎನ್ಎಲ್ಎಫ್ ಮುಖ್ಯಸ್ಥ ಲಾಮ್ಜಿಂಗ್ಬಾ ಖುಂಡೋನಗ್ಬಾಮ್, “ನಾವಿಂದು ಭಾರತ ಸರ್ಕಾರದೊಂದಿಗೆ ಕದನ ವಿರಾಮದ ಒಪ್ಪಂದಕ್ಕೆ ಸಹಿ ಮಾಡಿದ್ದೇವೆ” ಎಂದು ತಿಳಿಸಿದ್ದಾರೆ.

ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ಮೇ 3ರಂದು ಜನಾಂಗೀಯ ಸಂಘರ್ಷ ಸ್ಫೋಟಿಸಿದ ನಂತರ, ಇದೇ ಪ್ರಥಮ ಬಾರಿಗೆ ಕಣಿವೆ ಮೂಲದ ತೀವ್ರವಾದಿ ಸಂಘಟನೆಯೊಂದು ಸರ್ಕಾರದೊಂದಿಗೆ ಶಾಂತಿ ಒಪ್ಪಂದವನ್ನು ಮಾಡಿಕೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News