ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಮಹಿಳೆ ಸೇರಿ ಇಬ್ಬರ ಹತ್ಯೆ
ಗುವಾಹತಿ: ಜನಾಂಗೀಯ ಕಲಹದಿಂದ ಪ್ರಕ್ಷುಬ್ಧಗೊಂಡಿರುವ ಮಣಿಪುರದಲ್ಲಿ 55 ವರ್ಷ ವಯಸ್ಸಿನ ಮಾನಸಿಕ ಅಸ್ವಸ್ಥ ಮಹಿಳೆ ಹಾಗೂ 34 ವರ್ಷದ ವ್ಯಕ್ತಿಯೊಬ್ಬರನ್ನು ಬಂದೂಕುಧಾರಿಯೊಬ್ಬ ಹತ್ಯೆ ಮಾಡಿರುವುದಾಗಿ ವರದಿಯಾಗಿದೆ.
ಲೂಸಿ ಮರಿಮ್ ಎಂಬ ಮಹಿಳೆಯನ್ನು ಹತ್ಯೆ ಮಾಡಿದ ಬಂದೂಕುಧಾರಿ ಹಂತಕ ಪರಾರಿಯಾಗಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.
ಇಂಫಾಲ ಪೂರ್ವ ಜಿಲ್ಲೆಯ ಕೀಬಿ ಹೀಕಾಕ್ ಮಪಲ್ ಗ್ರಾಮದಲ್ಲಿ ಮಹಿಳೆಯ ಮುಖಕ್ಕೆ ಗುಂಡಿಟ್ಟು ಹತ್ಯೆ ಮಾಡಿದ ಭಯಾನಕ ಘಟನೆ ಸಂಬಂಧ ಐವರು ಮಹಿಳೆಯರು ಸೇರಿದಂತೆ ಒಂಬತ್ತು ಮಂದಿಯನ್ನು ಬಂಧಿಸಿದ ಬೆನ್ನಲ್ಲೇ ಈ ಘಟನೆ ನಡೆದಿದೆ. ಬಂಧಿತರಿಂದ ಎರಡು ಶಸ್ತ್ರಾಶ್ತ್ರಗಳು ಐದು ಮದ್ದುಗುಂಡು ಹಾಗೂ ಒಂದು ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಟ್ವೀಟ್ ಮಾಡಿದ್ದಾರೆ.
ಭಾನುವಾರ ನಡೆದ ಮತ್ತೊಂದು ಘಟನೆಯಲ್ಲಿ ಕಂಗ್ಪೊಕ್ಪಿ ಜಿಲ್ಲೆಯ ತಂಗ್ಭೊ ಗ್ರಾಮದ ಜಂಗೋಮಲ್ ಹಾಕಿಪ್ ಎಂಬಾತನನ್ನು ಶಂಕಿತ ಉಗ್ರರು ಭಾನುವಾರ ಹತ್ಯೆ ಮಾಡಿದ್ದಾರೆ.
ಕಳೆದ ಕೆಲ ದಿನಗಳಲ್ಲಿ ಮಾನಸಿಕ ಅಸ್ವಸ್ಥ ಮಹಿಳೆಯನ್ನು ಹತ್ಯೆ ಮಾಡಿರುವ ಎರಡನೇ ಘಟನೆ ಇದಾಗಿದೆ. ಜುಲೈ 6ರಂದು ದೊನ್ನಗೈಚಿಂಗ್ ಎಂಬ ಮಹಿಳೆಯನ್ನು ಇದೇ ರೀತಿ ಹತ್ಯೆ ಮಾಡಲಾಗಿತ್ತು.
ಶನಿವಾರ ಹತ್ಯೆಗೀಡಾದ ಲೂಸಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಳು ಎಂದು ಐಟಿಎಲ್ಎಫ್ (ಇಂಡೀಜೀನಿಯಸ್ ಟ್ರೈಬಲ್ ಲೀಡರ್ಸ್ ಫೋರಂ) ಹೇಳಿಕೆ ನೀಡಿದೆ. ಮಣಿಪುರದ ರಾಜಧಾನಿಯಲ್ಲಿ ಸರ್ಕಾರಕ್ಕೆ ಇನ್ನೂ ಕಾನೂನು ಮತ್ತು ಸುವ್ಯವಸ್ಥೆ ವಿಚಾರದಲ್ಲಿ ನಿಯಂತ್ರಣ ಇಲ್ಲ ಎನ್ನುವುದನ್ನು ಇದು ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಲೂಸಿ ಹತ್ಯೆಯನ್ನು ವಿರೋಧಿಸಿ ಮಣಿಪುರದ ನಾಗಾ ಜನಾಂಗದವರು ಹೆಚ್ಚಾಗಿ ವಾಸಿಸುತ್ತಿರುವ ಪಟ್ಟಣಗಳಲ್ಲಿ 12 ಗಂಟೆಗಳ ಬಂದ್ ಗೆ ಯುನೈಟೆಡ್ ನಾಗಾ ಕೌನ್ಸಿಲ್ ಕರೆ ನೀಡಿದೆ. ಅಂತೆಯೇ ಬುಡಕಟ್ಟು ಏಕತೆ ಸಮಿತಿ ರಾಷ್ಟ್ರೀಯ ಹೆದ್ದಾರಿ-2ರಲ್ಲಿ 72 ಗಂಟೆಗಳ ಬಂದ್ಗೆ ಕರೆ ನೀಡಿದೆ. ಈ ಹತ್ಯೆಯನ್ನು ಸಮಿತಿ ಖಂಡಿಸಿದ್ದು, ಪಶ್ಚಿಮ ಇಂಫಾಲದಲ್ಲಿ ಶನಿವಾರ ಕಿಡಿಗೇಡಿಗಳು ಎಲ್ಪಿಜಿ ಒಯ್ಯುತ್ತಿದ್ದ ಟ್ರಕ್ ಗಳಿಗೆ ಬೆಂಕಿ ಹಚ್ಚಿದ ಘಟನೆಯನ್ನೂ ಖಂಡಿಸಿದೆ.