ಮಣಿಪುರದ ಪುತ್ರಿಯರಿಗೆ ಆಗಿರುವುದನ್ನು ಯಾವ ಕಾರಣಕ್ಕೂ ಕ್ಷಮಿಸಲು ಸಾಧ್ಯವಿಲ್ಲ: ಪ್ರಧಾನಿ ಮೋದಿ ಮೊದಲ ಪ್ರತಿಕ್ರಿಯೆ

Update: 2023-07-20 06:32 GMT

ಪ್ರಧಾನಿ ನರೇಂದ್ರ ಮೋದಿ (Photo : ANI )

ಹೊಸದಿಲ್ಲಿ: ಮಣಿಪುರ ಹಿಂಸಾಚಾರ ಹಾಗೂ ಇಬ್ಬರು ಮಹಿಳೆಯರನ್ನು ನಗ್ನ ಮೆರವಣಿಗೆ ಮಾಡಿರುವ ವೈರಲ್ ವಿಡಿಯೊ ಕುರಿತು ಗುರುವಾರ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, ಇದರಿಂದ ನನಗೆ ನೋವಾಗಿದೆ ಎಂದು ಹೇಳಿದ್ದಾರೆ. ಸಂಸತ್ತಿನ ಮುಂಗಾರು ಅಧಿವೇಶನದ ಪ್ರಾರಂಭಕ್ಕೂ ಮುನ್ನ ಮಾತನಾಡಿದ ಪ್ರಧಾನಿ ಮೋದಿ, ಪ್ರಜಾಪ್ರಭುತ್ವದ ದೇಗುಲವಾದ ಸಂಸತ್ತನ್ನು ಪ್ರವೇಶಿಸುವ ಮುನ್ನ ನನ್ನ ಹೃದಯ ನೋವು ಹಾಗೂ ಸಿಟ್ಟಿನಿಂದ ತುಂಬಿದೆ ಎಂದು ಹೇಳಿದ್ದಾರೆ. "ಮುನ್ನೆಲೆಗೆ ಬಂದಿರುವ ಮಣಿಪುರ ಘಟನೆಯು ಯಾವುದೇ ನಾಗರಿಕತೆಯ ಪಾಲಿಗೆ ನಾಚಿಕೆಗೇಡಿನ ಸಂಗತಿ. ಅಪರಾಧಗಳ ವಿರುದ್ಧ, ವಿಶೇಷವಾಗಿ ಮಹಿಳೆಯರ ವಿರುದ್ಧದ ಅಪರಾಧಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಾನು ಎಲ್ಲ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ. ಈ ಘಟನೆ ರಾಜಸ್ಥಾನ, ಛತ್ತೀಸ್‌ಗಢ ಅಥವಾ ಮಣಿಪುರ ಸೇರಿದಂತೆ ಎಲ್ಲೇ ನಡೆದಿರಲಿ, ಅಪರಾಧಿಗಳು ಮಾತ್ರ ದೇಶದ ಯಾವುದೇ ದಿಕ್ಕಿನಲ್ಲೂ ಶಿಕ್ಷೆ ಇಲ್ಲದೆ ಪಾರಾಗಬಾರದು" ಎಂದೂ ಮೋದಿ ಆಗ್ರಹಿಸಿದ್ದಾರೆ ಎಂದು hindustantimes.com ವರದಿ ಮಾಡಿದೆ.

"ಯಾವುದೇ ದುಷ್ಕರ್ಮಿಗಳಿಗೂ ರಿಯಾಯಿತಿ ತೋರುವುದಿಲ್ಲವೆಂದು ನಾನು ದೇಶದ ಜನರಿಗೆ ಭರವಸೆ ನೀಡುತ್ತೇನೆ. ಮಣಿಪುರದ ಪುತ್ರಿಯರಿಗೆ ಆಗಿರುವುದನ್ನು ಯಾವ ಕಾರಣಕ್ಕೂ ಕ್ಷಮಿಸಲು ಸಾಧ್ಯವಿಲ್ಲ" ಎಂದೂ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನ ಮಣಿಪುರ ಹಿಂಸಾಚಾರದ ಕುರಿತು ಸರ್ಕಾರದಿಂದ ಉತ್ತರ ಪಡೆಯಲು ವಿರೋಧ ಪಕ್ಷಗಳು ಒಗ್ಗಟ್ಟಾಗಿ ಯುದ್ಧಸನ್ನದ್ಧವಾಗಿರುವಾಗ ಪ್ರಧಾನಿ ನರೇಂದ್ರ ಮೋದಿಯವರಿಂದ ಮಣಿಪುರ ವಿಡಿಯೊ ಕುರಿತು ಮೊದಲ ಪ್ರತಿಕ್ರಿಯೆ ಹೊರ ಬಂದಿದೆ.

ಈ ನಡುವೆ, ಪ್ರಧಾನಿ ಮೋದಿಯವರಿಗೆ ಎನ್‌ಡಿಎ ಸಭೆ ಕರೆಯಲು ಕಾಲಾವಕಾಶವಿದೆಯೇ ಹೊರತು ಮಣಿಪುರಕ್ಕೆ ಭೇಟಿ ನೀಡಲಲ್ಲ ಎಂದು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ. "ನಿಮ್ಮ ಮೌನವನ್ನು ಭಾರತ ಖಂಡಿತ ಕ್ಷಮಿಸುವುದಿಲ್ಲ. ನಿಮ್ಮ ಸರ್ಕಾರಕ್ಕೆ ಪಾಪಪ್ರಜ್ಞೆ ಇದ್ದರೆ ನೀವು ಮಣಿಪುರದ ಕುರಿತು ಸಂಸತ್ತಿನಲ್ಲಿ ಮಾತಾಡಬೇಕು ಹಾಗೂ ಕೇಂದ್ರ ಮತ್ತು ರಾಜ್ಯಗಳೆರಡರಲ್ಲಿನ ನಿಮ್ಮ ಅಸಾಮರ್ಥ್ಯಕ್ಕೆ ಇತರರನ್ನು ದೂಷಿಸದೆ ಏನಾಯಿತು ಎಂಬುದನ್ನು ದೇಶಕ್ಕೆ ತಿಳಿಸಬೇಕು" ಎಂದು ಖರ್ಗೆ ಆಗ್ರಹಿಸಿದ್ದಾರೆ.

ಎರಡು ತಿಂಗಳ ಹಿಂದೆ ನಡೆದಿದ್ದ ಘಟನೆಯ ಕುರಿತು ರಾಷ್ಟ್ರಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಿಗೇ, ಕೃತ್ಯದಲ್ಲಿ ಭಾಗಿಯಾಗಿದ್ದ ಮುಖ್ಯ ಆರೋಪಿಗಳನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಮಣಿಪುರ ಮುಖ್ಯಮಂತ್ರಿ ಎನ್.ಬೀರೇನ್ ಸಿಂಗ್, "ನಿನ್ನೆ ಕಾಣಿಸಿಕೊಂಡಿರುವ ಆಘಾತಕಾರಿ ವಿಡಿಯೊದಲ್ಲಿ ತೀವ್ರ ಅಗೌರವಪೂರ್ವಕ ಹಾಗೂ ಅಮಾನುಷ ಕೃತ್ಯಕ್ಕೆ ಬಲಿಯಾಗಿರುವ ಇಬ್ಬರು ಮಹಿಳೆಯರಿಗಾಗಿ ನನ್ನ ಹೃದಯ ಮಿಡಿಯುತ್ತಿದೆ. ವಿಡಿಯೊ ಹೊರ ಬರುತ್ತಿದ್ದಂತೆಯೆ, ಈ ಘಟನೆಯ ಕುರಿತು ಕೂಡಲೇ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು, ಇಂದು ಬೆಳಗ್ಗೆ ಪೊಲೀಸರು ಮೊದಲ ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯ ಘಟನೆಯ ಕುರಿತು ಆಳವಾದ ತನಿಖೆ ಪ್ರಗತಿಯಲ್ಲಿದ್ದು, ಎಲ್ಲ ದುಷ್ಕರ್ಮಿಗಳ ವಿರುದ್ಧ ಮರಣ ದಂಡನೆ ವಿಧಿಸುವ ಸಾಧ್ಯತೆಯೂ ಸೇರಿದಂತೆ ಎಲ್ಲ ಬಗೆಯ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ನಾವು ಭರವಸೆ ನೀಡುತ್ತೇವೆ. ಅದರಿಂದ ಸಮಾಜದಲ್ಲಿ ಇಂತಹ ನೀಚ ಕೃತ್ಯಗಳಿಗೆ ಜಾಗವಿರುವುದಿಲ್ಲ ಎಂಬುದು ತಿಳಿಯುವಂತಾಗಲಿ" ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News