ಮಣಿಪುರಕ್ಕೆ ಭೇಟಿ ನೀಡಿ ಶಾಂತಿ ಮರುಸ್ಥಾಪಿಸಿ: ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ಆಗ್ರಹ
ಹೊಸದಿಲ್ಲಿ: ಮಣಿಪುರದಲ್ಲಿನ ಇತ್ತೀಚಿನ ಹಿಂಸಾತ್ಮಕ ಸಂಘರ್ಷಗಳು ಹಾಗೂ ರಕ್ತಪಾತ ತೀವ್ರ ಮನಕಲಕುವಂತಿದ್ದು, ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡಿ, ಶಾಂತಿಯನ್ನು ಮರುಸ್ಥಾಪಿಸಬೇಕು ಎಂದು ಶನಿವಾರ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.
ನಾಪತ್ತೆಯಾಗಿದ್ದ ಆರು ಮಂದಿಯ ಪೈಕಿ ಮೂವರ ಮೃತದೇಹಗಳು ನದಿಯಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ, ಶನಿವಾರ ಪ್ರತಿಭಟನಾಕಾರರು ಮೂವರು ರಾಜ್ಯ ಸಚಿವರು ಹಾಗೂ ಆರು ಶಾಸಕರ ನಿವಾಸಗಳ ಮೇಲೆ ದಾಳಿ ನಡೆಸಿದರು. ಹೀಗಾಗಿ, ರಾಜ್ಯದ ಐದು ಜಿಲ್ಲೆಗಳಲ್ಲಿ ಪ್ರತಿಬಂಧಕಾಜ್ಞೆಯನ್ನು ಜಾರಿಗೊಳಿಸಿರುವ ರಾಜ್ಯ ಸರಕಾರ, ಈ ಭಾಗಗಳಲ್ಲಿ ಅಂತರ್ಜಾಲ ಸೇವೆ ಅಮಾನತುಗೊಳಿಸಿದೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, “ಕೇಂದ್ರ ಮತ್ತು ರಾಜ್ಯ ಸರಕಾರಗಳು ಈ ಸಮಸ್ಯೆಯ ಕುರಿತು ಪರಾಮರ್ಶೆ ಮಾಡಿಕೊಂಡು, ಪರಿಹಾರ ಹುಡುಕಬೇಕು ಎಂಬುದು ಪ್ರತಿ ಭಾರತೀಯರ ಬಯಕೆಯಾಗಿದೆ” ಎಂದು ಬರೆದುಕೊಂಡಿದ್ದಾರೆ.
“ಪ್ರಧಾನಿ ನರೇಂದ್ರ ಮೋದಿ ಮಣಿಪುರಕ್ಕೆ ಭೇಟಿ ನೀಡಿ, ಈ ಪ್ರಾಂತ್ಯದಲ್ಲಿ ಶಾಂತಿ ಮತ್ತು ಸಾಂತ್ವನಕ್ಕೆ ಚಾಲನೆ ನೀಡಬೇಕು ಎಂದು ನಾನು ಆಗ್ರಹಿಸುತ್ತೇನೆ” ಎಂದೂ ಅವರು ಹೇಳಿದ್ದಾರೆ.
ಕಳೆದ ವರ್ಷ ಮೇ ತಿಂಗಳಿನಿಂದ ಮಣಿಪುರದಲ್ಲಿ ಕುಕಿ ಮತ್ತು ಮೈತೈ ಸಮುದಾಯಗಳ ನಡುವೆ ಪ್ರಾರಂಭವಾಗಿರುವ ಹಿಂಸಾಚಾರದಲ್ಲಿ ಇದುವರೆಗೆ 200ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.