ಮಣಿಪುರ ಹಿಂಸಾಚಾರ : ವಾರಸುದಾರರಿಲ್ಲದ ಮೃತದೇಹಗಳ ಘನತೆಯುಕ್ತ ಅಂತ್ಯಕ್ರಿಯೆಗೆ ಸುಪ್ರೀಂ ಕೋರ್ಟ್ ಆದೇಶ
ಹೊಸದಿಲ್ಲಿ: ಮಣಿಪುರ ಹಿಂಸಾಚಾರದಲ್ಲಿ ಮೃತಪಟ್ಟ ವಾರಸುದಾರರಿಲ್ಲದ ಅಥವಾ ಗುರುತು ಪತ್ತೆಯಾಗದ ವ್ಯಕ್ತಿಗಳ ಮೃತದೇಹಗಳ ಅಂತ್ಯಕ್ರಿಯೆಯನ್ನು ಯೋಗ್ಯ ಹಾಗೂ ಘನತೆಯುಕ್ತವಾಗಿ ನೆರವೇರಿಸಬೇಕು ಎಂದು ಮಣಿಪುರ ಸರ್ಕಾರಕ್ಕೆ ಮಂಗಳವಾರ ಸುಪ್ರೀಂ ಕೋರ್ಟ್ ಆದೇಶಿಸಿದೆ ಎಂದು barandbench.com ವರದಿ ಮಾಡಿದೆ.
ಮೇ 2023ರಿಂದ ಮಣಿಪುರದಲ್ಲಿ ಹಿಂಸಾಚಾರ ಮುಂದುವರಿದಿರುವುದನ್ನು ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾ. ಜೆ.ಬಿ.ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠವು, ಗುರುತು ಪತ್ತೆಯಾಗದ ಮೃತದೇಹಗಳನ್ನು ಅನಿರ್ದಿಷ್ಟಾವಧಿ ಕಾಲ ಶವಾಗಾರದಲ್ಲೇ ಇರಿಸುವುದು ಸೂಕ್ತವಲ್ಲ ಎಂದು ಅಭಿಪ್ರಾಯ ಪಟ್ಟಿತು.
ಅದರ ಪ್ರಕಾರ, ಗುರುತು ಪತ್ತೆಯಾಗದ ಮೃತ ದೇಹಗಳ ಸಂಬಂಧಿಕರ ನಂತರದ ವ್ಯಕ್ತಿಗಳಿಗೆ ಈ ಕುರಿತು ಅಧಿಕೃತ ಮಾಹಿತಿ ನೀಡಬೇಕು. ಅಂತ್ಯಕ್ರಿಯೆಯನ್ನು ಘನತೆ ಹಾಗೂ ಮೃತ ವ್ಯಕ್ತಿಯ ಸಾಮುದಾಯಿಕ ಧಾರ್ಮಿಕ ಕ್ರಿಯೆಯೊಂದಿಗೆ ನೆರವೇರಿಸಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿತು.
ಮಣಿಪುರದಲ್ಲಿನ ಹಿಂಸಾಚಾರದ ಕುರಿತು ಕ್ರಿಮಿನಲ್ ತನಿಖೆ ಪ್ರಗತಿಯಲ್ಲಿರುವುದರಿಂದ ಅಂತ್ಯಕ್ರಿಯೆ ನೆರವೇರಿಸುವುದಕ್ಕೂ ಮುನ್ನ ಮೃತ ವ್ಯಕ್ತಿಯಿಂದ ಡಿಎನ್ ಎ ಮಾದರಿಗಳನ್ನು ಸಂಗ್ರಹಿಸಬೇಕು ಎಂದೂ ನ್ಯಾಯಾಲಯವು ಸೂಚಿಸಿದೆ.