ಮಣಿಪುರ ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣ: ಜನರ ಗುಂಪಿಗೆ ನಮ್ಮನ್ನು ಒಪ್ಪಿಸಿದ್ದೇ ಪೊಲೀಸರು; ಸಂತ್ರಸ್ತೆ ಆರೋಪ

Update: 2023-07-20 14:25 GMT

Screengrab : Twitter

ಇಂಫಾಲ: ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಗುರಿಯಾಗಿರುವ ಮಣಿಪುರದಲ್ಲಿ ನಡೆದ ಮಹಿಳೆಯರ ಬೆತ್ತಲೆ ಮೆರವಣಿಗೆ ಹಾಗೂ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆಘಾತಕಾರಿ ಮಾಹಿತಿ ಹೊರ ಬಿದ್ದಿದೆ. ಘಟನಾ ಸ್ಥಳದಲ್ಲಿ ಪೊಲೀಸರು ಇದ್ದರು, ಅವರೇ ಸಂತ್ರಸ್ತೆಯನ್ನು ದುಷ್ಕರ್ಮಿಗಳ ಗುಂಪಿಗೆ ಹಸ್ತಾಂತರಿಸಿದರು ಎಂದು ಓರ್ವ ಸಂತ್ರಸ್ತೆ ಮಹಿಳೆ ಹೇಳಿಕೊಂಡಿದ್ದಾರೆ ಎಂದು indianexpress.com ವರದಿ ಮಾಡಿದೆ.

ತಮ್ಮ ಹಳ್ಳಿಯ ಮೇಲೆ ಜನರ ಗುಂಪು ದಾಳಿ ನಡೆಸುತ್ತಿರುವಾಗ ಇಬ್ಬರು ಮಹಿಳೆಯರು ಜನಸಮೂಹದಿಂದ ತಪ್ಪಿಸಿ ಹತ್ತಿರದ ಕಾಡಿನಲ್ಲಿ ಆಶ್ರಯ ಪಡೆದಿದ್ದರಿಂದ ಗುಂಪು ಕೆರಳಿತ್ತು ಎಂದು ಸಂತ್ರಸ್ತೆ ಹೇಳಿರುವುದಾಗಿ ವರದಿಯಾಗಿದೆ. ನಂತರ ತೌಬಲ್ ಪೊಲೀಸರು ಅವರನ್ನು ರಕ್ಷಿಸಿ ಪೊಲೀಸ್ ಠಾಣೆಗೆ ಕರೆದೊಯ್ಯುತ್ತಿದ್ದರು, ಈ ವೇಳೆ ದಾರಿ ಮಧ್ಯೆ ಜನರ ಗುಂಪು ಎದುರಾಗಿದ್ದು, ಪೊಲೀಸರು ನಮ್ಮನ್ನು ಜನರ ಗುಂಪಿಗೆ ಹಸ್ತಾಂತರಿಸಿದರು ಎಂದು ಸಂತ್ರಸ್ತೆ ಮಹಿಳೆ indianexpress.com ಜೊತೆಗೆ ಹೇಳಿಕೊಂಡಿದ್ದಾರೆ.

"ನಮ್ಮ ಗ್ರಾಮದ ಮೇಲೆ ದಾಳಿ ನಡೆಸುತ್ತಿದ್ದ ಗುಂಪಿನೊಂದಿಗೆ ಪೊಲೀಸರು ಇದ್ದರು, ಪೊಲೀಸರು ನಮ್ಮನ್ನು ಮನೆಯ ಸಮೀಪದಿಂದ ಗ್ರಾಮದಿಂದ ಸ್ವಲ್ಪ ದೂರದವರೆಗೆ ನಮ್ಮನ್ನು ಕರೆದೊಯ್ದು, ಗುಂಪಿನ ನಡುವೆ ನಮ್ಮನ್ನು ಬಿಟ್ಟು ಕೊಟ್ಟರು. ನಮ್ಮನ್ನು ಪೊಲೀಸರೇ ಅವರಿಗೆ ಒಪ್ಪಿಸಿದರು” ಎಂದು ಸಂತ್ರಸ್ತೆಯೊಬ್ಬರು ಹೇಳಿದ್ದಾರೆ.

ದಾಳಿಯಲ್ಲಿ ತನ್ನ ತಂದೆ ಮತ್ತು ಸಹೋದರನ್ನು ಕಳೆದುಕೊಂಡಿರುವ ಇನ್ನೋರ್ವ ಸಂತ್ರೆಸ್ತೆ ಕೂಡಾ ಪೊಲೀಸರ ಮೇಲೆ ಆರೋಪ ಹೊರಿಸಿದ್ದಾರೆ. ಘಟನಾ ಸ್ಥಳದಲ್ಲಿ ಕಾರಿಸೊಳಗೆ ನಾಲ್ವರು ಪೊಲೀಸರು ಇದ್ದರು, ಅವರು ಹಿಂಸಾಚಾರವನ್ನು ನೋಡುತ್ತಲೇ ಇದ್ದರು ಎಂದು ಮಹಿಳೆ ಹೇಳಿರುವುದಾಗಿ TheWire ವರದಿ ಮಾಡಿದೆ.

ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ಜನರ ಗುಂಪು ಮೆರವಣಿಗೆ ಮಾಡುತ್ತಿರುವುದು ವೈರಲ್‌ ಆಗಿದ್ದು, ಮಹಿಳೆಯರ ಗುಪ್ತಾಂಗಗಳನ್ನು ಎಳೆದಾಡುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ. ಘಟನೆ ಮೇಯಲ್ಲಿ ನಡೆದಿದ್ದರೂ, ತಡವಾಗಿ ಬೆಳಕಿಗೆ ಬಂದಿದೆ. ಮಣಿಪುರದಲ್ಲಿ ಇಂಟರ್‌ನೆಟ್‌ ಮೇಲೆ ನಿರ್ಬಂಧ ಹೇರಿದ್ದರಿಂದ ಘಟನೆಯ ವಿಡಿಯೋ ತಡವಾಗಿ ವೈರಲ್‌ ಆಗಿರಬೇಕು ಎಂದು ಅಂದಾಜಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News