“ಮಣಿಪುರ ಉರಿಯುತ್ತಿದೆ, ನನ್ನ ಗ್ರಾಮಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ”: ಸಂತ್ರಸ್ತರಿಗೆ ಪದಕ ಅರ್ಪಿಸಿದ ರೋಶಿಬಿನಾ ದೇವಿ

Update: 2023-09-28 17:51 GMT

ನವೋರೆಮ್ ರೋಶಿಬಿನಾ ದೇವಿ| Photo: NDTV

ಹೊಸದಿಲ್ಲಿ: ಹಾಂಗ್‍ಝೌನಲ್ಲಿ ನಡೆಯುತ್ತಿರುವ ಏಶ್ಯನ್ ಗೇಮ್ಸ್ ಲ್ಲಿ ಗುರುವಾರ ಮಹಿಳೆಯರ 60 ಕೆಜಿ ವುಶು ವಿಭಾಗದಲ್ಲಿ ಬೆಳ್ಳಿ ಗೆದ್ದ ಭಾರತದ ನವೋರೆಮ್ ರೋಶಿಬಿನಾ ದೇವಿ ತಮ್ಮ ಪದಕವನ್ನು ಮಣಿಪುರ ಸಂತ್ರಸ್ತರಿಗೆ ಅರ್ಪಿಸಿದ್ದಾರೆ.

“ಮಣಿಪುರ ಉರಿಯುತ್ತಿದೆ. ರಾಜ್ಯದಲ್ಲಿ ಸಂಘರ್ಷ ನಡೆಯುತ್ತಿದೆ. ನನ್ನ ಗ್ರಾಮಕ್ಕೆ ಹೋಗಲು ನನಗೆ ಸಾಧ್ಯವಾಗುತ್ತಿಲ್ಲ. ನಮ್ಮನ್ನು ರಕ್ಷಿಸುತ್ತಿರುವವರು ಮತ್ತು ಹಿಂಸೆಯ ಸಂತ್ರಸ್ತರಿಗೆ ನಾನು ಈ ಪದಕವನ್ನು ಅರ್ಪಿಸಲು ಬಯಸುತ್ತೇನೆ’’ ಎಂದು ಪದಕ ಗೆದ್ದ ಬಳಿಕ ಮಾತನಾಡಿದ ರೋಶಿಬಿನಾ ದೇವಿ ಹೇಳಿದರು.

ಮೆತೈ ಸಮುದಾಯಕ್ಕೆ ಸೇರಿರುವ ರೋಶಿಬಿನಾ ದೇವಿ ಚುರಚಾಂದ್‍ಪುರ ಜಿಲ್ಲೆಗೆ ಹೊಂದಿಕೊಂಡ ಬಿಷ್ಣುಪುರ ಜಿಲ್ಲೆಯ ಕ್ವಾಶಿಫಲ್ ಗ್ರಾಮದ ನಿವಾಸಿಯಾಗಿದ್ದಾರೆ. ಚುರಚಾಂದ್‍ಪುರದಲ್ಲಿ ಕುಕಿ ಜನಾಂಗೀಯ ಸಮುದಾಯದ ಪ್ರಾಬಲ್ಯವಿದೆ. ಮಣಿಪುರದಲ್ಲಿ ಮೇ ತಿಂಗಳಿನಿಂದ ನಡೆಯುತ್ತಿರುವ ಜನಾಂಗೀಯ ಕದನದಲ್ಲಿ 200ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

“ಏನಾಗುತ್ತದೆ ಎಂದು ನನಗೆ ಗೊತ್ತಿಲ್ಲ. ಸಂಘರ್ಷ ಮುಂದುವರಿಯುತ್ತಿದೆ. ಅದು ಯಾವಾಗ ನಿಲ್ಲುತ್ತದೆ ಮತ್ತು ಪರಿಸ್ಥಿತಿ ಹಿಂದಿನ ದಿನಗಳ ಮಟ್ಟಕ್ಕೆ ಮರಳುತ್ತದೆ ಎನ್ನುವುದು ಗೊತ್ತಿಲ್ಲ’’ ಎಂದು ಅಳುತ್ತಾ ಹೇಳಿದರು.

ಹಾಂಗ್‍ಝೌನಲ್ಲಿ ನಡೆಯುತ್ತಿರುವ ಏಶ್ಯನ್ ಗೇಮ್ಸ್‍ನಲ್ಲಿ ಗುರುವಾರ ಮಹಿಳೆಯರ 60 ಕೆಜಿ ವುಶು ಸಾಂಡ ಫೈನಲ್‍ನಲ್ಲಿ ರೋಶಿಬಿನಾ ದೇವಿ ಸೋಲನುಭವಿಸಿದ್ದಾರೆ. ಅವರನ್ನು ಚೀನಾದ ವು ಶಿಯಾವೊವೈ 2-0 ಸೆಟ್‍ಗಳಿಂದ ಸೋಲಿಸಿದರು. ಇದರೊಂದಿಗೆ ರೋಶಿಬಿನಾ ದೇವಿ ಬೆಳ್ಳಿ ಪದಕಕ್ಕೆ ತೃಪ್ತರಾದರು.

ಈ ವಿಭಾಗದಲ್ಲಿ ಚೀನಾದ ಸ್ಪರ್ಧಿ ಹಾಲಿ ಚಾಂಪಿಯನ್ ಆಗಿದ್ದಾರೆ. ರೋಶಿಬಿನಾ ಆರಂಭದಿಂದಲೇ ಚೀನಾ ಸ್ಪರ್ಧಿಯಿಂದ ಕಠಿಣ ಸವಾಲು ಎದುರಿಸಿದರು. ವು ಶಿಯಾವೊವೈ ಆರಂಭದಿಂದಲೇ ಮೇಲುಗೈ ಪಡೆದರು. ಎರಡು ಸುತ್ತಿನ ಹೋರಾಟದ ಬಳಿಕ, ನಿರ್ಣಾಯಕರು ಚೀನಾದ ಸ್ಪರ್ಧಿಯನ್ನು ವಿಜಯಿ ಎಂಬುದಾಗಿ ಘೋಷಿಸಿದರು.

2018ರಲ್ಲಿ ಜಕಾರ್ತದಲ್ಲಿ ನಡೆದ ಏಶ್ಯನ್ ಗೇಮ್ಸ್‍ನಲ್ಲಿ ಮಣಿಪುರದ ಕ್ರೀಡಾಪಟು ರೋಶಿಬಿನಾ ಕಂಚು ಗೆದ್ದಿದ್ದರು. ಈ ಬಾರಿ ಬೆಳ್ಳಿ ಗೆಲ್ಲುವ ಮೂಲಕ ತನ್ನ ದರ್ಜೆಯನ್ನು ಉತ್ತಮಪಡಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News