ಬಿಹಾರ: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ; ಇಲಿಗಳ ಕಾರಣ ನೀಡಿದ ವೈದ್ಯರು

Update: 2024-11-17 09:16 GMT

ನಳಂದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ (Photo: PTI)

ಪಾಟ್ನಾ: ಬಿಹಾರದ ಆಸ್ಪತ್ರೆಯೊಂದರಲ್ಲಿ ಮೃತ ವ್ಯಕ್ತಿಯೋರ್ವನ ಎಡಗಣ್ಣು ಕಾಣೆಯಾಗಿದೆ. ಮೃತನ ಕಣ್ಣನ್ನು ಮಾರಾಟ ಮಾಡುವ ಉದ್ದೇಶದಿಂದ ತೆಗೆಯಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದರೆ, ವೈದ್ಯರು, ಇಲಿಗಳು ಇದಕ್ಕೆ ಕಾರಣ ಎಂದು ಸಬೂಬು ಹೇಳಿಕೊಂಡು ನುಣುಚಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಪಾಟ್ನಾದ ಎರಡನೇ ಅತಿದೊಡ್ಡ ಆಸ್ಪತ್ರೆ ಎಂದು ಹೆಸರು ಪಡೆದಿರುವ ನಳಂದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಫ್ಯಾಂಟಸ್ ಕುಮಾರ್ ಎಂಬವರನ್ನು ಹೊಟ್ಟೆಗೆ ಗುಂಡು ತಗುಲಿದ ಕಾರಣದಿಂದ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮರುದಿನ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದ್ದಾರೆ. ಶನಿವಾರದವರೆಗೆ ಅವರ ಕುಟುಂಬವು ಅವರ ಜೊತೆಯೇ ಇತ್ತು. ಅವರು ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದ ಕೆಲ ಗಂಟೆಗಳಲ್ಲಿ ಅವರ ಬಳಿ ಕುಟುಂಬಸ್ಥರು ಯಾರೂ ಇರಲಿಲ್ಲ. ಮತ್ತೆ ಮೃತದೇಹದ ಬಳಿ ಬಂದು ನೋಡಿದಾಗ ಅವರ ಎಡಗಣ್ಣು ಕಾಣೆಯಾಗಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿದ ಮೃತನ ಸೋದರ ಮಾವ, ಆಸ್ಪತ್ರೆಯಲ್ಲಿ ಯಾರೋ ಕಣ್ಣು ತೆಗೆದಿರಬೇಕು ಎಂದು ಹೇಳಿಕೊಂಡಿದ್ದಾರೆ. ಒಂದಾ ಗುಂಡು ಹಾರಿಸಿದ ಜನರೊಂದಿಗೆ ಸೇರಿಕೊಂಡು ಯಾರೋ ಕಣ್ಣು ತೆಗೆದಿದ್ದಾರೆ ಅಥವಾ ಆಸ್ಪತ್ರೆಯಲ್ಲಿ ಇದ್ದವರು ಯಾರೋ ಮಾರಾಟ ಮಾಡುವ ಉದ್ದೇಶದಿಂದ ಕಣ್ಣನ್ನು ತೆಗೆದಿದ್ದಾರೆ ಎಂದು ಆರೋಪಿಸಿದ್ದಾರೆ.

ಪೊಲೀಸರು ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಮೃತದೇಹದಲ್ಲಿ ಗಾಯಗಳು ಕಂಡು ಬಂದಿದೆ ಎಂದು ಖಚಿತಪಡಿಸಿದ್ದಾರೆ. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಈ ಕುರಿತು ಪ್ರತಿಕ್ರಿಯಿಸಿದ್ದು, ಇಲಿಗಳು ಕಣ್ಣಿಗೆ ಕಚ್ಚುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ನಾವು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯಬೇಕಾಗಿದೆ. ಘಟನೆಯು ಸ್ವೀಕಾರಾರ್ಹವಲ್ಲ. ಇದರಲ್ಲಿ ಯಾರಾದರು ತಪ್ಪಿತಸ್ಥರು ಎಂದು ಕಂಡು ಬಂದರೆ ಅವರಿಗೆ ಶಿಕ್ಷೆ ವಿಧಿಸಲಾಗುತ್ತದೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News