ಕುದುರೆ ವ್ಯಾಪಾರದ ಬೆದರಿಕೆ ; ಜಾರ್ಖಂಡ್ ನ ಕಾಂಗ್ರೆಸ್ ಶಾಸಕರಿಗೆ ಹೈದರಾಬಾದ್ ನ ರೆಸಾರ್ಟ್ ನಲ್ಲಿ ಬಿಗಿ ಭದ್ರತೆ

Update: 2024-02-03 15:33 GMT

Photo: indianexpress.com 

ಹೈದರಾಬಾದ್: ‘ಕುದುರೆ ವ್ಯಾಪಾರ ’ದ ಯಾವುದೇ ಪ್ರಯತ್ನಗಳನ್ನು ವಿಫಲಗೊಳಿಸಲು ಜಾರ್ಖಂಡ್ ನ ತನ್ನ ಶಾಸಕರನ್ನು ಇಲ್ಲಿಯ ರೆಸಾರ್ಟ್ ವೊಂದರಲ್ಲಿ ಇರಿಸಿರುವ ಕಾಂಗ್ರೆಸ್, ಅವರನ್ನು ರಕ್ಷಿಸಿಕೊಳ್ಳಲು ಯಾವುದೇ ಪ್ರಯತ್ನವನ್ನು ಬಿಟ್ಟಿಲ್ಲ. ಈ ಶಾಸಕರಿಗೆ ಪ್ರತ್ಯೇಕ ಊಟದ ಏರ್ಪಾಡು, ಅವರು ತಂಗಿರುವ ಕೋಣೆಗಳಿಗೆ ಪೋಲಿಸ್ ಭದ್ರತೆ ಮತ್ತು ಇತರ ಹಲವಾರು ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಶುಕ್ರವಾರ ವಿಶೇಷ ವಿಮಾನಗಳಲ್ಲಿ ಇಲ್ಲಿಗೆ ಆಗಮಿಸಿದ ಜಾರ್ಖಂಡ್ ನ ಸುಮಾರು 40 ಶಾಸಕರನ್ನು ಶಮೀರ್ ಪೇಟ್ ನಲ್ಲಿಯ ಲಿಯೋನಿಯಾ ಹೋಲಿಸ್ಟಿಕ್ ಡೆಸ್ಟಿನೇಷನ್ ಗೆ ಕರೆದೊಯ್ಯಲಾಗಿತ್ತು. ಅಲ್ಲಿ ತಂಗಿರುವ ಶಾಸಕರ ಮೇಲೆ ಎಐಸಿಸಿ ಕಾರ್ಯದರ್ಶಿ ಹಾಗೂ ತೆಲಂಗಾಣ ಉಸ್ತುವಾರಿ ದೀಪಾ ದಾಸಮುನ್ಶಿ ಅವರು ಕಣ್ಗಾವಲು ಇರಿಸಿದ್ದಾರೆ.

ರೆಸಾರ್ಟ್ ನಲ್ಲಿ ಶಾಸಕರು ಉಳಿದುಕೊಂಡಿರುವ ಅಂತಸ್ತಿಗೆ ಪ್ರವೇಶವನ್ನು ಕೇವಲ ಒಂದು ಲಿಫ್ಟ್ ಗೆ ಸೀಮಿತಗೊಳಿಸಲಾಗಿದ್ದು, ಅದನ್ನು ಶಾಸಕರು ಮತ್ತು ಅಧಿಕೃತ ವ್ಯಕ್ತಿಗಳು ಮಾತ್ರ ಬಳಸಬಹುದು. ಇತರ ಲಿಫ್ಟ್ ಗಳನ್ನು ಬಳಸಿ ಅಥವಾ ಇತರ ಮಾರ್ಗಗಳ ಮೂಲಕ ಶಾಸಕರು ತಂಗಿರುವ ಸ್ಥಳಕ್ಕೆ ತಲುಪಲು ಯಾರಿಗೂ ಸಾಧ್ಯವಿಲ್ಲ. ಪೋಲಿಸ್ ಅಧಿಕಾರಿಗಳು ದಿನದ 24 ಗಂಟೆಯೂ ಲಿಫ್ಟ್ ನ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಕಾವಲು ಕಾಯುತ್ತಿದ್ದಾರೆ. ಶಾಸಕರು ಉಳಿದುಕೊಂಡಿರುವ ಕೊಠಡಿಗಳಿಗೂ ಇದೇ ವ್ಯವಸ್ಥೆಯನ್ನು ಮಾಡಲಾಗಿದೆ.

ಶಾಸಕರಿಗಾಗಿ ಮೊದಲ ಅಂತಸ್ತಿನಲ್ಲಿ ಪ್ರತ್ಯೇಕ ಭೋಜನ ವ್ಯವಸ್ಥೆಯನ್ನು ಮಾಡಲಾಗಿದ್ದು, ರೆಸಾರ್ಟಿನ ಇತರ ಅತಿಥಿಗಳಿಗೆ ಅಲ್ಲಿಗೆ ತಲುಪಲು ಸಾಧ್ಯವಿಲ್ಲ. ಡೈನಿಂಗ್ ಹಾಲ್ ಗೂ ಬಿಗಿ ಪೋಲಿಸ್ ಭದ್ರತೆಯನ್ನು ಒದಗಿಸಲಾಗಿದೆ.

ಶಾಸಕರ ಮೊಬೈಲ್ ಫೋನುಗಳು ಇನ್ನೂ ಅವರ ಬಳಿಯಲ್ಲಿಯೇ ಇವೆ. ರೆಸಾರ್ಟ್ ನಲ್ಲಿ ಮಫ್ತಿಯಲ್ಲಿರುವ ಪೋಲಿಸ್ ಅಧಿಕಾರಿಗಳು ತುಂಬಿದ್ದಾರೆ.

ವಿಶ್ವಾಸ ಮತಕ್ಕೆ ಮುನ್ನ ಬಿಜೆಪಿಯು ಶಾಸಕರನ್ನು ‘ಬೇಟೆಯಾಡಲು’ ಪ್ರಯತ್ನಿಸಬಹುದು ಎಂಬ ಆತಂಕಗಳ ನಡುವೆಯೇ ಜಾರ್ಖಂಡ್ ನ ಆಡಳಿತಾರೂಢ ಜೆಎಂಎಂ ನೇತೃತ್ವದ ಮೈತ್ರಿಕೂಟದ ಸುಮಾರು 40 ಕಾಂಗ್ರೆಸ್ ಶಾಸಕರನ್ನು ಇಲ್ಲಿಯ ರೆಸಾರ್ಟ್ ನಲ್ಲಿರಿಸಲಾಗಿದೆ.

ರೆಸಾರ್ಟ್ ಗೆ ತೆರಳುವ ಮಾರ್ಗಗಳಲ್ಲಿ ಪೋಲಿಸರು ಬ್ಯಾರಿಕೇಡ್ ಗಳನ್ನು ಅಳವಡಿಸಿದ್ದು, ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಫೆ.5ರಂದು ಜಾರ್ಖಂಡ್ ನ ಚಂಪಾಯಿ ಸೊರೇನ್ ಸರಕಾರವು ವಿಶ್ವಾಸ ಮತವನ್ನು ಎದುರಿಸಲಿದ್ದು, ಅಂದು ಬೆಳಿಗ್ಗೆ ಶಾಸಕರು ರಾಂಚಿಗಾಗಿ ಹೈದರಾಬಾದ್ ನಿಂದ ನಿರ್ಗಮಿಸಲಿದ್ದಾರೆ ಎಂದು ತೆಲಂಗಾಣ ಕಾಂಗ್ರೆಸ್ ಮೂಲಗಳು ತಿಳಿಸಿದವು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News